ಜಿಲ್ಲೆ

ಧಾರ್ಮಿಕ ಕಾರ್ಯಗಳಿಗೆ ಧರ್ಮಸ್ಥಳ ಸಂಸ್ಥೆ ಕೊಡುಗೆ

ಸಿರಗುಪ್ಪ: ಜನರನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸುವುದರಿಂದ ಸಹೋದರತ್ವ ಭಾವನೆ ಜಾಗೃತಗೊಳ್ಳಲಿದೆ. ಈ ಮೂಲಕ ಸುಂದರ ಸಮಾಜ ನಿರ್ಮಿಸಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು ತಿಳಿಸಿದರು.

ತಾಳೂರು ಗ್ರಾಮದ ಶ್ರೀ ಪೋತಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಒಂದು ಲಕ್ಷ ರೂ. ಮೊತ್ತದ ಡಿಡಿಯನ್ನು ದೇವಸ್ಥಾನದ ಸಮಿತಿಗೆ ಹಸ್ತಾಂತರಿಸಿ ಇತ್ತೀಚಿಗೆ ಮಾತನಾಡಿದರು. ಧಾರ್ಮಿಕ ಕಾರ್ಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಕೊಡುಗೆ ನೀಡುತ್ತಾ ಬರುತ್ತಿದ್ದು, ಇದರಿಂದ ರಾಜ್ಯದಲ್ಲಿ ಭಕ್ತಿ, ಭಾವ, ಆಧ್ಯಾತ್ಮಿಕತೆ ಹೆಚ್ಚಲು ಸಹಾಯವಾಗಲಿದೆ. ಭಜನಾ ಮಂಡಳಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆ ಭಜನಾ ಕಮ್ಮಟ ಆಯೋಜನೆಯೊಂದಿಗೆ ಗ್ರಾಮಗಳಲ್ಲಿರುವ ಭಜನಾ ಮಂಡಳಿಗಳಿಗೆ ಕಟ್ಟಡ ನಿರ್ಮಾಣ ಹಾಗೂ ತರಬೇತಿಗೆ ಸಹಕಾರ ನಿಡಲಾಗುತ್ತಿದೆ ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಭಾಸ್ಕರ್ ರೆಡ್ಡಿ, ಖಜಾಂಚಿ ಕೆ.ಈರಣ್ಣ, ಮೇಲ್ವಿಚಾರಕರಾದ ಪ್ರಭಯ್ಯ, ತಾಲೂಕು ಸ್ವ ಸಹಾಯ ಸಂಘಗಳ ಲೆಕ್ಕಪರಿಶೋಧನಾಧಿಕಾರಿ ಸುವರ್ಣ, ಸೇವಾ ಪ್ರತಿನಿಧಿ ಮಲ್ಲಿಕಾರ್ಜುನ, ದೇವಸ್ಥಾನ ಸಮಿತಿ ಸದಸ್ಯರು ಇದ್ದರು.