ಜೇವರ್ಗಿ: ಮಠ, ಮಂದಿರಗಳಲ್ಲಿ ಆಯೋಜಿಸುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನೆಮ್ಮದಿ ಪ್ರಾಪ್ತಿ ಆಗುವುದರ ಜತೆಗೆ ಸದೃಢ ಹಾಗೂ ಭಾವೈಕ್ಯತೆಯ ಸಮಾಜ ನಿರ್ಮಾಣ ಆಗಲಿದೆ ಎಂದು ಶಾಸಕ ಡಾ. ಅಜಯಸಿಂಗ್ ಹೇಳಿದರು.
ಶಕಾಪುರ (ಎಸ್.ಎ) ಗ್ರಾಮದ ತಪೋವನ ಮಠದಲ್ಲಿ ಸದ್ಗುರು ವಿಶ್ವಾರಾಧ್ಯರು ಹಾಗೂ ಮಾತೋಶ್ರೀ ಬಸವಾಂಬೆ ಅವರ 71ನೇ ಜಾತ್ರೋತ್ಸವ ನಿಮಿತ್ತ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯನ್ನ ಉದ್ಘಾಟಿಸಿ ಮಾತನಾಡಿ, ಧರ್ಮದ ತಳಹದಿ ಮೇಲೆ ಸಮಾಜ ನಿರ್ಮಾಣ ಅಗತ್ಯ. ಶಕಾಪುರ ತಪೋವನ ಮಠದ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದು, ಸತ್ಯ ಶುದ್ಧ ಕಾಯಕ ಮಾಡುತ್ತಿದ್ದಾರೆ ಎಂದರು.
ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿದರು. ಬೆಂಗಳೂರಿನ ಖ್ಯಾತ ಮೂಳೆ ಮತ್ತು ಕೀಲು ತಜ್ಞ ಡಾ.ಕಿರಣ್ ಚೌಕ್ ಅವರಿಗೆ ವಿಶ್ವ ಬಸವಾಂಬೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಮುಚಳಂಬಾದ ಶ್ರೀ ಪ್ರಣವಾನಂದ ಸ್ವಾಮೀಜಿ, ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಾಗಣಗೇರಿಯ ಶ್ರೀ ಡಾ.ವಿಶ್ವಾರಾಧ್ಯ ಶಿವಾಚಾರ್ಯರು, ಅಷ್ಟಗಿಯ ಶ್ರೀ ನಿಜಲಿಂಗ ಶಿವಾಚಾರ್ಯ, ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯ, ಗಡಿಗೌಡಗಾಂವ್ನ ಶ್ರೀ ಶಾಂತವೀರ ಶಿವಾಚಾರ್ಯರು, ಓಂಕಾರ ಬೇನೂರಿನ ಶ್ರೀ ಸಿದ್ಧರೇಣುಕ ಶಿವಾಚಾರ್ಯರು, ಕುಳೇ ಕುಮಟಗಿಯ ಶ್ರೀ ಗುರುಸ್ವಾಮಿ ಶರಣರು, ಇಂಗಳಗಿ ಪುಣ್ಯಾಶ್ರಮದ ಶ್ರೀ ಚಂದ್ರಶೇಖರ ಶರಣರು ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್, ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಪ್ರಮುಖರಾದ ಜಗದೇವಪ್ಪ ಪಾಟೀಲ್ ಕೊಂಕನಳ್ಳಿ, ಚಂದ್ರಶೇಖರ ಹರನಾಳ, ರಮೇಶಬಾಬು ವಕೀಲ, ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಚನಮಲ್ಲಯ್ಯ ಹಿರೇಮಠ, ಡಾ.ಪಿ.ಎಂ.ಮಠ ಇತರರಿದ್ದರು.
ಭವ್ಯ ರಥೋತ್ಸವ: ತಪೋವನ ಮಠದ ಮುಂಭಾಗದ ಬೃಹತ್ ಆವರಣದಲ್ಲಿ ಸಂಜೆ 6 ಗಂಟೆಗೆ ಸಹಸ್ರಾರು ಭಕ್ತರ ಮಧ್ಯೆ ಸಂಭ್ರಮದಿಂದ ರಥೋತ್ಸವ ನೆರವೇರಿತು. ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರ ಸಮ್ಮುಖದಲ್ಲಿ ಶಾಸಕ ಡಾ. ಅಜಯಸಿಂಗ್ ಅವರು ತೇರಿಗೆ ಚಾಲನೆ ನೀಡಿದರು. ಅಪಾರ ಭಕ್ತರು ಜೈ ಘೋಷಗಳೊಂದಿಗೆ ರಥವನ್ನೆಳೆದು ಕೃತಾರ್ಥರಾದರು. ಬಾಳೆ ಹಣ್ಣು, ಉತ್ತತ್ತು, ನಾಣ್ಯಗಳನ್ನು ಎಸೆಯುವುದು ಕಂಡುಬಂದಿತು. ಸದ್ಗುರು ವಿಶ್ವಾರಾಧ್ಯ ಮಹಾರಾಜ್ ಕಿ ಜೈ.. ಶ್ರೀ ಬಸವಾಂಬೆ ಮಾತಾ ಕಿ ಜೈ.. ಸಿದ್ಧರಾಮ ಶ್ರೀಗಳಿಗೆ ಜೈ ಘೋಷಣೆಗಳು ಮೊಳಗಿದವು.