ವಿಜಯವಾಣಿ ಸುದ್ದಿಜಾಲ ಧಾರವಾಡ
ಮಧ್ಯಪ್ರದೇಶ ಸರ್ಕಾರ ಓಂಕಾರೇಶ್ವರ ಜ್ಯೋತಿರ್ಲಿಂಗದ ಪರಿಸರದಲ್ಲಿ ನಿರ್ಮಿಸಿದ ಸಾರ್ವತ್ರಿಕ ಕೇಂದ್ರ ಹಾಗೂ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆ ಅನಾವರಣ ಸೆ. 18ರಂದು ಏರ್ಪಡಿಸಿದ್ದು, ಇದರ ನಿಮಿತ್ತದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಧಾರವಾಡದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ನ್ಯಾಯ ಚೂಡಾಮಣಿ ಪಂ. ರಾಜೇಶ್ವರ ಶಾಸ್ತ್ರಿಗಳ ನೇತೃತ್ವದಲ್ಲಿ ಜರುಗುತ್ತಿರುವುದು ವಿಶೇಷ.
ಶ್ರೀಮದ್ ಜಗದ್ಗುರು ಆದಿಶಂಕರಾಚಾರ್ಯರ ಜೀವನ, ಬೋಧನೆ ಹಾಗೂ ಅವರ ಸಂದೇಶಗಳನ್ನು ಜಗತ್ತಿಗೆ ಪ್ರಚುರ ಪಡಿಸಲು ಮಧ್ಯಪ್ರದೇಶ ಸರ್ಕಾರ ಜೋತ್ಯಿರ್ಲಿಂಗದ ಪರಿಸರದಲ್ಲಿ ಏಕಾತ್ಮಧಾಮ ಹೆಸರಿನ ಏಕತೆಯ ಪ್ರತೀಕವಾಗಿ ಸಾರ್ವತ್ರಿಕ ಕೇಂದ್ರ ಹಾಗೂ 108 ಅಡಿ ಎತ್ತರದ ಲೋಹದ ಪ್ರತಿಮೆ ಸ್ಥಾಪಿಸಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದು, ಈ ಕಾರ್ಯಕ್ರಮದ ಶುಭಮೂಹೂರ್ತ ಹಾಗೂ ರೂಪುರೇಷೆಯನ್ನು ಧಾರವಾಡದ ರಾಜೇಶ್ವರ ಶಾಸ್ತ್ರೀಗಳೇ ಸಿದ್ಧಪಡಿಸಿದ್ದಾರೆ ಎನ್ನುವುದು ಕನ್ನಡಿಗರಿಗೆ ಅಭಿಮಾನ ಮೂಡಿಸುವ ಸಂಗತಿ.
ಸಮಾರಂಭದಲ್ಲಿ ದೇಶದ ವಿವಿಧ ಭಾಗಗಳ ಖ್ಯಾತ ವಿದ್ಯಾಂಸರು, ಋತ್ವಿಜರು ಆಗಮಿಸಲಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಧಾರವಾಡದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆ ಪ್ರಾಧ್ಯಾಪಕ ನ್ಯಾಯ ಚೂಡಾಮಣಿ ಪಂ. ವಾಚಸ್ಪತಿ ಶಾಸ್ತ್ರೀ ಜೋಶಿ ಶಂಕರ ಭಾಷ್ಯ ಪಾರಾಯಣ ಮಾಡಲಿದ್ದು, ವಿದ್ವಾನ್ ವಿಶ್ವನಾಥ ಶಾಸ್ತ್ರೀ ಜೋಶಿ ವಿಶೇಷ ಹೋಮಗಳ ನೇತೃತ್ವ ವಹಿಸಲಿದ್ದಾರೆ. ವೇದಮೂರ್ತಿಗಳಾದ ಮನೋಹರ್ ಭಟ್ ಹಂದಿಗೋಳ, ಉಮೇಶ ಶಿರಗಾಂವಕರ್, ಸಂಜೀವ ಕುಲಕರ್ಣಿ ಸೇರಿ ಧಾರವಾಡದ ಹಲವು ಸಂಸ್ಕೃತ ವಿದ್ವಾಂಸರು ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ.