ಸೊರಬ ಮುರುಘಾ ಮಠದಲ್ಲಿ ಕಸಾಪದಿಂದ ಆಯೋಜಿಸಿದ್ದ ಪೆಟ್ಲು ಹಬ್ಬ ಕಾರ್ಯಕ್ರಮವನ್ನು ದಂತ ವೈದ್ಯ ಡಾ. ಎಚ್.ಇ.ಜ್ಞಾನೇಶ್ ಉದ್ಘಾಟಿಸಿದರು. ಶ್ರೀಪಾದ ಬಿಚ್ಚುಗತ್ತಿ, ಕೃಷ್ಣಪ್ಪ ಓಟೂರು, ನಾಗರಾಜ್ ಗುತ್ತಿ ಇತರರಿದ್ದರು. 
ಜಿಲ್ಲೆ

ಧಾರ್ಮಿಕ ಆಲೋಚನೆ ಬಿತ್ತರಿಸುವ ಹಬ್ಬಗಳ ಆಚರಣೆ

ಸೊರಬ: ಹಬ್ಬಗಳು ನಾಡಿನ ವೈಚಾರಿಕ ಹಾಗೂ ಧಾರ್ಮಿಕ ಆಲೋಚನೆ ಬಿತ್ತರಿಸುವ ಮೂಲಕ ವೈಶಿಷ್ಟತೆ ಹೊಂದಿವೆ ಎಂದು ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಮುರುಘಾ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್, ರೋಟರಿ ಕ್ಲಬ್ ಮತ್ತು ಹೆಲ್ಪಿಂಗ್ ಹ್ಯಾಂಡ್ ಸಹಯೋಗದಲ್ಲಿ ಆಯೋಜಿಸಿದ್ದ ಪೆಟ್ಲು ಹಬ್ಬ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮೊಬೈಲ್, ದೃಶ್ಯ ಮಾಧ್ಯಮ ಹಾಗೂ ಆಧುನಿಕ ಸಂಸ್ಕೃತಿ ಪ್ರಭಾವದಿಂದ ಪಾರಂಪರಿಕವಾಗಿ ಬೆಳೆದು ಬಂದ ಗ್ರಾಮೀಣ ಕ್ರೀಡೆ, ಹಬ್ಬ, ಪರಂಪರೆ, ಇತಿಹಾಸ ಅಳಿವಿನ ಅಂಚಿನಲ್ಲಿವೆ. ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಸಹಭಾಗಿತ್ವದಿಂದ ಮುಂದಾಗಬೇಕು. ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ಪರಂಪರೆ, ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ತಿಳಿಸಿದರು.

ದಂತ ವೈದ್ಯ ಡಾ. ಎಚ್.ಇ.ಜ್ಞಾನೇಶ್ ಮಾತನಾಡಿ, ಪೆಟ್ಲು ಹಬ್ಬ ಗ್ರಾಮೀಣ ಭಾಗದಲ್ಲಿ ಬೆಳೆದು ಬಂದ ಹಬ್ಬವಾಗಿದೆ. ಆಧುನಿಕ ಪ್ರಭಾವದಲ್ಲಿ ಈ ಹಬ್ಬ ಮರೆಯಾಗುತ್ತಿರುವುದು ವಿಪರ್ಯಾಸ. ಮುಂದಿನ ಪೀಳಿಗೆಗೆ ಇದನ್ನು ಪರಿಚಯಿಸುವ ಅಗತ್ಯವಿದೆ. ಈ ಪರಂಪರೆಯ ಅರಿವನ್ನು ಮೂಡಿಸಬೇಕಿದೆ ಎಂದರು.

ಇತಿಹಾಸಕಾರ ಶ್ರೀಪಾದ ಬಿಚ್ಚುಗತ್ತಿ, ರೋಟರಿ ಕ್ಲಬ್ ಸೊರಬ ಸಂಸ್ಥೆ ಕಾರ್ಯದರ್ಶಿ ಕೃಷ್ಣಪ್ಪ ಓಟೂರು, ಉದ್ಯಮಿ ನಾಗರಾಜ್ ಗುತ್ತಿ, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಚಾರ್, ಆಕಾಶವಾಣಿ ಕಲಾವಿದ ಗುರುಮೂರ್ತಿ, ಪುರಸಭೆ ಸದಸ್ಯ ಪರಶುರಾಮ್ ಸಣ್ಣಬೈಲ್, ಹೆಲ್ಪಿಂಗ್ ಹ್ಯಾಂಡ್ ಮಧುರಾಮ್, ಲಿಂಗರಾಜ್ ಕೆ.ಗೌಡ, ರೂಪಾ ಮಧುಕೇಶ್ವರ್, ಡಿ.ಶಿವಯೋಗಿ ಇತರರಿದ್ದರು.

ನಶಿಸುತ್ತಿರುವ ಪೆಟ್ಲು ಹಬ್ಬದ ವೈಶಿಷ್ಟವನ್ನು ಪರಿಚಯಿಸುವ ಮತ್ತು ಉಳಿಸುವ ಕಾರ್ಯವನ್ನು ಕಸಾಪ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ಗ್ರಾಮೀಣ ಭಾಗದಲ್ಲಿ ಕ್ರೀಡಾ ಹಬ್ಬ ಮಹತ್ವಪೂರ್ಣವಾಗಿ ಬೆಳೆದು ಬಂದು ಇಂದು ಮಾಯವಾಗುತ್ತಿದೆ. ಭವಿಷ್ಯದ ಪೀಳಿಗೆಗೆ ಇದರ ಅರಿವು ಮೂಡಿಸಬೇಕು.

ಜೆ.ಎಸ್.ಮಹಾಂತೇಶ, ರೋಟರಿ ಕ್ಲಬ್ ಸೊರಬ ಅಧ್ಯಕ್ಷ