ಜಿಲ್ಲೆ

ಧಾರ್ಮಿಕ ಆಚರಣೆಯಿಂದ ಏಕತೆ ಸಾಧ್ಯ : ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯ

ಮಂಜುನಾಥ ತಿಮ್ಮಯ್ಯ

ಮೈಸೂರು: ಧಾರ್ಮಿಕ ಆಚರಣೆಯಿಂದ ಸಮಾಜದಲ್ಲಿ ಏಕತೆ ಸಾಧ್ಯವಾಗಲಿದೆ ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಕ್ಷೇತ್ರ ಸುತ್ತೂರಿನಲ್ಲಿ ಆಯೋಜಿಸಿದ್ದ ಭಜನಾ ಮೇಳದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾತ್ರೆ, ಯಾತ್ರೆ, ಮೇಳಗಳು ಪ್ರತಿಯೊಬ್ಬರ ಹೃದಯದಲ್ಲಿ ಮತ್ತು ಸಮಾಜದಲ್ಲಿ ಭಕ್ತಿಯನ್ನು ಅರಳಿಸುತ್ತವೆ. ಆಚರಣೆ ಸಂದರ್ಭದಲ್ಲಿ ಯಾವ ಜಾತಿ, ಯಾವ ಭಾಷೆ ಕೇಳಲ್ಲ. ಒಂದೇ ಮನಸ್ಸಿನಲ್ಲಿ ದೇವರ ದರ್ಶನ, ಆಧ್ಯಾತ್ಮಿಕ ದರ್ಶನಕ್ಕೆ ಮೊರೆಹೋಗುತ್ತಾರೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳ, ಸುತ್ತೂರು ಜಾತ್ರೆಯಲ್ಲಿ ಇದನ್ನೇ ಕಾಣಬಹುದು ಎಂದು ತಿಳಿಸಿದರು.

ಬರೀ ಇತಿಹಾಸ ಹೇಳುವುದರಿಂದ ಒಳ್ಳೆಯದು ಆಗಲ್ಲ. ಸತ್ಯ, ಧರ್ಮಪಥದಲ್ಲಿ ಸಾಗಿದರೆ ಮಾತ್ರ ಇದು ಸಾಧ್ಯವಾಗಲಿದೆ ಎಂದರು.

ಯುವಜನರು ಮಾದಕ ವಸ್ತುಗಳಿಗೆ, ಭೋಗದ ಜೀವನಕ್ಕೆ, ಲಾಲಸಗೆ ಬಲಿಯಾಗುತ್ತಿದ್ದಾರೆ. ಹೀಗಾದರೆ ಮುಂದಿನ ಜೀವನ ಹೇಗೆ ಇರಲಿದೆ? ಈಗಲೂ ಜಾತಿ, ಅಸ್ಪಶ್ಯತೆ, ಪ್ರಾದೇಶಿಕತೆಯ ಕಚ್ಚಾಟವೇ ನಿಂತಿಲ್ಲ. ಹೀಗಾದರೆ ಏಕತೆ ಬರುವುದು ಹೇಗೆ? ಜಗತ್ತಿಗೆ ಮಾರ್ಗದರ್ಶನ ಮಾಡುವುದು ಹೇಗೆ? ಈ ಅನಿಷ್ಟಗಳೆಲ್ಲವನ್ನೂ ತ್ಯಜಿಸಬೇಕು. ಸೇವೆ ಮತ್ತು ಕರ್ತವ್ಯ ಮಾರ್ಗದಲ್ಲಿ ಭವಿಷ್ಯ ಕಂಡುಕೊಳ್ಳಬೇಕು ಎಂದರು.

ಸತ್ಯ ನುಡಿಯುವುದಷ್ಟೇ ಅಲ್ಲ, ಸತ್ಯವನ್ನು ಜನರಲ್ಲೂ ನುಡಿಸಬೇಕು. ಸತ್ಯಪಥ, ಜ್ಞಾನಪಥದಲ್ಲಿ ಸಾಗುವಂತೆಯೂ ಮಾಡಬೇಕು. ಧರ್ಮಶ್ರದ್ಧೆ, ಧಾರ್ಮಿಕ ಕಳವಳಿಯನ್ನು ಸಮಾಜದಲ್ಲಿ ಉಜ್ಜೀವನಗೊಳಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಸುತ್ತೂರು ಮಠ ಮಾಡುತ್ತಿದೆ. ಕೃಷಿ, ಶಿಕ್ಷಣ, ವೈದ್ಯಕೀಯ, ಗ್ರಾಮಾಭಿವೃದ್ಧಿಯ ಕಲ್ಯಾಣ ಕೆಲಸ ಮಾಡುತ್ತಿರುವುದರ ಜತೆಗೆ, ಸಹಬಾಳ್ವೆ, ಆಧ್ಯಾತ್ಮಿಕತೆ, ಧಾರ್ಮಿಕತೆಯನ್ನೂ ಜನರಲ್ಲಿ ಬಿತ್ತುತ್ತಿದೆ ಎಂದರು.

ಮಣಕವಾಡ ಅನ್ನದಾನೀಶ್ವರ ಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮೊಬೈಲ್ ಸಂಪೂರ್ಣವಾಗಿ ಬಂದಾದರೆ ಶೇ.70ರಷ್ಟು ಜನರಿಗೆ ಹುಚ್ಚು ಹಿಡಿಯಲಿದೆ. ಮೊಬೈಲ್‌ಗೆ ದಾಸರಾಗಬೇಡಿ. ಯಾವ ಸ್ಥಳಕ್ಕೆ ಹೋಗಬೇಕೆಂದು ಗೂಗಲ್ ಮ್ಯಾಪ್ ತಿಳಿಸುತ್ತದೆ. ಆದರೆ, ಅದು ಸ್ವರ್ಗ ಮ್ಯಾಪ್ ತೋರಿಸಲ್ಲ. ಗುರುಗಳಿಂದ ಮಾತ್ರ ಇದು ಸಾಧ್ಯ ಎಂದರು.

ಸಣ್ಣಪುಟ್ಟ ವಿಷಯಕ್ಕೆ ಜಗಳವಾಡಬೇಡಿ. ಇದರಿಂದ ಏನು ಬರಲ್ಲ. ಸಾರಿ ಎಂದು ಕೇಳಿ ಬಿಡಿ ಜಗಳವೇ ತಿಳಿಯಾಗಿ ಸಾಮರಸ್ಯ ಮೂಡುತ್ತದೆ. ಅಂತಹ ಶಕ್ತಿ ಆ ಒಂದು ಶಬ್ದಕ್ಕೆ ಇದೆ ಎಂದರು.

ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಮಾತನಾಡಿ, ಧರ್ಮ, ಆಧ್ಯಾತ್ಮಿಕತೆ, ಸಂಸ್ಕೃತಿಯನ್ನು ಜನರ ಮನ, ಮನೆಯಲ್ಲಿ ಬಿತ್ತಬೇಕು. ಆದರೀಗ ಧರ್ಮ, ಆಧ್ಯಾತ್ಮಿಕತೆ ಮನೆ, ಮನಗಳಲ್ಲಿ ಕಳೆಗುಂದುತ್ತಿದೆ. ಜಾತ್ರೆ, ಕುಂಭಮೇಳದಲ್ಲಿ ಮಾತ್ರ ಇದು ವಿಜೃಂಭಿಸುತ್ತಿದೆ. ಧರ್ಮ-ಆಧ್ಯಾತ್ಮಿಕ ಪ್ರೇಮವನ್ನು ಬಿತ್ತುತ್ತಿರುವ ಸಾಧು-ಸಂತರನ್ನು ಗೌರವಿಸಬೇಕು. ಸ್ವಾಮಿ ವಿವೇಕಾನಂದರು ಬಯಸಿದಂತೆ ದೇಶದಲ್ಲಿ ಧರ್ಮ ಜಾಗೃತಿ ಮೂಡುತ್ತಿದೆ ಎಂದರು.

ಯುಎಸ್‌ಎ ಬಿಸಿನೆಸ್ ಇಂಟೆಗ್ರಾ ಕಂಪನಿಯ ಸಹ ಸಂಸ್ಥಾಪಕ ಸೆಲ್ವ ಜಯರಾಮನ್ ಮಾತನಾಡಿ, ಭಾರತದಲ್ಲಿ ಹಿಂದೆ ಧರ್ಮಕ್ಕೆ 6 ಸಾವಿರ ವರ್ಷಗಳ ಇತಿಹಾಸವಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇದಕ್ಕೆ 134 ವರ್ಷದಷ್ಟು ಚರಿತ್ರೆ ಇದೆ. ಹೊರದೇಶಗಳಲ್ಲಿ ಕಳೆದ 25 ವರ್ಷಗಳಿಂದ ತ್ವರಿತವಾಗಿ ಹಿಂದು ಧರ್ಮ ಬೆಳೆಯುತ್ತಿದೆ. ಅಮೆರಿಕದಲ್ಲಿ 2 ಸಾವಿರ ದೇವಸ್ಥಾನಗಳಿವೆ. 4.5 ಮಿಲಿಯನ್ ಹಿಂದುಗಳಿದ್ದಾರೆ. ಅವರೆಲ್ಲ ಹಿಂದು ಸಂಪ್ರದಾಯವನ್ನು ಆಚರಣೆ ಮಾಡುತ್ತಿದ್ದಾರೆ ಎಂದರು.

ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಬರಗಾಲದ ಕಾರಣಕ್ಕೆ ಕಳೆದ ವರ್ಷ ಶಿವರಾತ್ರೀಶ್ವರ ಶಿವಯೋಗಿಯವರ ಜಯಂತಿಯನ್ನು ಮಳವಳ್ಳಿಯಲ್ಲಿ ಆಚರಣೆ ಮಾಡಲು ಆಗಲಿಲ್ಲ. ಮುಂದಿನ ಡಿಸೆಂಬರ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುವುದು. ಇದಕ್ಕೆ ಸುತ್ತೂರು ಶ್ರೀಗಳು ಒಪ್ಪಿಗೆ ನೀಡಬೇಕು ಎಂದು ಕೋರಿದರು.

ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ವೇದವನ್ನು ಓದಿದವರೆಲ್ಲ ವೇದಾಂತಿಯಲ್ಲ. ಅದನ್ನು ಅರಿತವರು, ಜನರ ಕಷ್ಟಗಳಿಗೆ ಸ್ಪಂದಿಸಿದವರು ನಿಜವಾದ ವೇದಾಂತಿ ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್, ನವದೆಹಲಿಯ ಕ್ರಿಬ್ಕೋ ಪ್ರತಿನಿಧಿ, ನಾಫೆಡ್ ನಿರ್ದೇಶಕ ಸಂಜಯ್ ಪಾಟೀಲ್, ಮಾಜಿ ಶಾಸಕ ನಿರಂಜನಕುಮಾರ್, ಕರಾಮುವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಆರ್‌ಎಸ್‌ಎಸ್ ಪ್ರಮುಖ ಮಾ.ವೆಂಕಟರಾಮ್ ಇತರರು ಇದ್ದರು.