ಬೆಳಗಾವಿ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆ ಮೇಲೆ ಬಿದಿದ್ದ ಮರ ತೆರವುಗೊಳಿಸುತ್ತಿರುವ ಸಿಬ್ಬಂದಿ. 
ಜಿಲ್ಲೆ

ಧಾರಾಕಾರ ಮಳೆಗೆ ಬೃಹತ್ ಮರ ಧರಾಶಾಯಿ

ಬೆಳಗಾವಿ: ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಾಗೂ ಜಿಲ್ಲೆಯ ಕೆಲ ಭಾಗಗಳಲ್ಲಿ ನಿರಂತರ ಮಳೆ ಮುಂದುವರಿದ ಪರಿಣಾಮ ನದಿಗಳ ನೀರಿನ ಮಟ್ಟ ಹೆಚ್ಚುತ್ತ ಸಾಗಿದೆ. ಧಾರಾಕಾರ ಮಳೆಗೆ ಬೆಳಗಾವಿ- ಚೋರ್ಲಾ ರಾಷ್ಟ್ರೀಯ ಹೆದ್ದಾರಿ ಮೇಲೆ ಬೃಹತ್ ಮರಗಳು ಬಿದ್ದು 6 ಗಂಟೆಗಳ ಕಾಲ ಕರ್ನಾಟಕ- ಗೋವಾ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಗುರುವಾರ ವೇದಗಂಗಾ, ದೂಧಗಂಗಾ ನದಿಯಿಂದ 29,568 ಕ್ಯೂಸೆಕ್, ರಾಜಾಪುರ ಬ್ಯಾರೆಜ್‌ನಿಂದ 1,20,375 ಕ್ಯೂಸೆಕ್ ಸೇರಿ ಕೃಷ್ಣಾ ನದಿಗೆ ಒಟ್ಟು 1,49, 943 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಡಕಲ್ ಜಲಾಯನ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ಹಿಡಕಲ್ ಜಲಾಶಯಕ್ಕೆ 29,133 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯ ಶೇ.98 ಭರ್ತಿಯಾಗಿದೆ. ಗುರುವಾರ ಗೇಟ್‌ಗಳ ಮೂಲಕ 10 ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಬಾ ನದಿಗೆ ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ನದಿ ದಡದ ಗ್ರಾಮಗಳಲ್ಲಿ ಜನರು ಸುರಕ್ಷಿತವಾದ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ನಾಲ್ಕೈದು ದಿನಗಳಿಂದ ಜಿಲ್ಲಾದ್ಯಂತ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೃಷ್ಣಾ, ಉಪ ನದಿಗಳು, ಘಟಪ್ರಭಾ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ 22 ಸೇತುವೆಗಳು ಮುಳುಗಡೆಯಾಗಿವೆ. 4,500 ಹೆಕ್ಟೇರ್ ಪ್ರದೇಶದಲ್ಲಿನ ಭತ್ತ, ಹೆಸರು, ಮೆಕ್ಕೆಜೋಳ, ಕಬ್ಬು ಸೇರಿ ವಿವಿಧ ಬೆಳೆಗಳು ಜಲಾವೃತಗೊಂಡಿವೆ. ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಬರೋಬ್ಬರಿ 245 ಮನೆಗಳು ಕುಸಿದು ಬಿದ್ದಿವೆ. ಮಣ್ಣಿನ ಮನೆಗಳಲ್ಲಿ ವಾಸಿಸುವ ಜನ ಆತಂಕದಲ್ಲೇ ಹೊತ್ತು ಕಳೆಯುತ್ತಿದ್ದಾರೆ. ರಸ್ತೆಗಳು ಕೆರೆಗಳಂತಾಗಿವೆ. ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಖಾನಾಪುರ ತಾಲೂಕಿನ ಹೆಮ್ಮಡಗಾ ರಸ್ತೆಯ ಮೇಲೆ ಹಾಲಾದ್ರಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಸಂಚಾರ ಬಂದ್ ಆಗಿದೆ.

ಗುಂಡೇನಟ್ಟಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ, ಬೀಡಿ ಗ್ರಾಮದಲ್ಲಿ ರೇಷ್ಮಾ ಸಮಶೇರ ಎಂಬುವರ ಮನೆ ಕುಸಿದು ಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.