ಜಿಲ್ಲೆ

ಧಾರಾಕಾರ ಮಳೆ: ಸಂಗಣ್ಣನಕೆರೆ ಗ್ರಾಮಸ್ಥರಿಗೆ ಮೇಘಸ್ಫೋಟದ ಅನುಭವ

ಆನಂದಪುರ: ಇಲ್ಲಿಗೆ ಸಮೀಪದ ಗೌತಮಪುರ ಗ್ರಾಪಂ ವ್ಯಾಪ್ತಿಯ ಸಂಗಣ್ಣನಕೆರೆ ಗ್ರಾಮದಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದ್ದು, ವರುಣಾಘಾತಕ್ಕೆ ಗ್ರಾಮಸ್ಥರು ನಡುಗಿ ಹೋಗಿದ್ದಾರೆ.

ಮಧ್ಯಾಹ್ನ 1 ಗಂಟೆ ವೇಳೆಗೆ ಆರಂಭಗೊಂಡ ಮಳೆ 2.15ರ ತನಕ ಎಡಬಿಡದೆ ಸುರಿಯಿತು. ನಮ್ಮ ಗ್ರಾಮದಲ್ಲೂ ಮೇಘಸ್ಫೋಟವಾಗಿರಬೇಕೆಂದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕಳೆದ 50-60 ವರ್ಷಗಳಲ್ಲಿ ಈ ಪ್ರಮಾಣದ ಮಳೆ ಕಂಡಿರಲಿಲ್ಲ ಎಂದಿದ್ದಾರೆ ಗ್ರಾಮದ ಹಿರಿಯರು.

ಗುಡ್ಡದ ಕಡೆಯಿಂದ ಪ್ರವಾಹದಂತೆ ಹರಿದು ಬಂದ ಮಳೆ ನೀರು ಅಡಕೆ ತೋಟ, ಭತ್ತದ ಗದ್ದೆಯನ್ನು ಆವರಿಸಿದೆ. ಫಸಲು ಹಾಳಾಗದಂತೆ ಕೆಲ ರೈತರು ಮನೆ ದೇವರು ಮತ್ತು ಗ್ರಾಮ ದೇವರಿಗೆ ಹರಕೆ ಕಟ್ಟಿಕೊಂಡಿದ್ದಾರೆ. ಕೆರೆ ತುಂಬಿ ಹೊಳೆಯಂತೆ ಬ್ಯಾಣ ಮತ್ತು ತೋಟದಲ್ಲಿ ಹರಿದ ಕಾರಣ ರಾಶಿ ರಾಶಿ ಮೀನು ಸಹ ತೇಲಿ ಬಂದಿದ್ದವು. ಮಕ್ಕಳು ಮತ್ತು ಹೆಂಗಸರು ಸೀರೆ, ಮೀನಿನ ಬಲೆ, ಅಡುಗೆ ಪಾತ್ರೆಗಳಲ್ಲಿ ಮೀನು ಹಿಡಿದು ಚೀಲದಲ್ಲಿ ತುಂಬಿ ಸಂಭ್ರಮಿಸಿದರು.