ಜಿಲ್ಲೆ

ಧಾರವಾಡ, ಬೆಳಗಾವಿಗೆ ಅಮಿತ್ ಷಾ ಭೇಟಿ

ಹುಬ್ಬಳ್ಳಿ :ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಧಾರವಾಡ ಹಾಗೂ ಬೆಳಗಾವಿ ಗ್ರಾಮಾಂತರ ಜಿಲ್ಲೆಗಳಲ್ಲಿ ಜ. 28ರಂದು ಪ್ರವಾಸ ಕೈಗೊಂಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜ. 27ರಂದು ದೆಹಲಿಯಿಂದ ಹುಬ್ಬಳ್ಳಿಗೆ ರಾತ್ರಿ 10.30ಕ್ಕೆ ಆಗಮಿಸಲಿರುವ ಅಮಿತ್ ಷಾ ಅವರು ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ ಎಂದರು.

28 ರಂದು ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿಯಲ್ಲಿ ಬಿವಿಬಿ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುವರು. ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ನೆರವೇರಿಸುವರು. ಧಾರವಾಡದಿಂದ ಕುಂದಗೋಳಕ್ಕೆ ಮಧ್ಯಾಹ್ನ 1.30ಕ್ಕೆ ತೆರಳಿ, ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವರು. ನಂತರ ರೋಡ ಶೋ ನಡೆಸಿ, ಕೆಲವು ಮನೆಗಳಿಗೆ ಭೇಟಿ ನೀಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳ ವಿವರಗಳುಳ್ಳ ಕರಪತ್ರಗಳನ್ನು ಹಂಚುವರು. ಕುಂದಗೋಳದ ಗಾಳಿಮರಿಯಮ್ಮನ ಗುಡಿಯಿಂದ ಮೂರಂಗಡಿ ಕ್ರಾಸ್​ನ ಮಾರ್ಗ ಅಥವಾ ಹುಬ್ಬಳ್ಳಿ-ಲಕ್ಷೆ್ಮೕಶ್ವರ ಮಾರ್ಗದಲ್ಲಿ ನಡೆಯಲಿರುವ ರೋಡ್ ಶೋದಲ್ಲಿ ಅಮಿತ್ ಷಾ ಅವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ನಂತರ ಮಧ್ಯಾಹ್ನ 4 ಗಂಟೆಗೆ ಬೆಳಗಾವಿ ಜಿಲ್ಲೆ ಎಂ.ಕೆ. ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಕಿತ್ತೂರು, ಬೈಲಹೊಂಗಲ ಹಾಗೂ ಖಾನಾಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಪ್ರಮುಖರ ಹಾಗೂ ಸಂಘಟನಾತ್ಮಕ ಸಭೆಯಲ್ಲಿ ಅಮಿತ್ ಷಾ ಭಾಗವಹಿಸುವರು. ಧಾರವಾಡ ಹಾಗೂ ಬೆಳಗಾವಿ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಅಧ್ಯಕ್ಷರು ಹಾಗೂ ಇತರ ಪ್ರಮುಖ ನಾಯಕರು ಭಾಗವಹಿಸುವರು ಎಂದರು.

ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಧಾರವಾಡ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.

ಕುಂದಗೋಳದಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ಪಕ್ಷದ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರು ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸುವರು. ಕಳೆದ ಬಾರಿ ಮಾಜಿ ಶಾಸಕ ಸಿ.ಎಸ್. ಶಿವಳ್ಳಿ ನಿಧನದ ಅನುಕಂಪದ ಅಲೆಯಿಂದಾಗಿ ಕಾಂಗ್ರೆಸ್​ನ ಕುಸುಮಾವತಿ ಶಿವಳ್ಳಿ ಗೆಲುವು ಸಾಧಿಸಿದರು ಎಂದು ಹೇಳಿದರು.

ಹು-ಧಾ ಪೂರ್ವ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಶಾಸಕ ಪ್ರಸಾದ ಅಬ್ಬಯ್ಯ ಅವರು ತಮ್ಮ ವೈಫಲ್ಯ ಮರೆಮಾಚಲು ಬಿಜೆಪಿಯವರು ನಡೆಸಿದ ಆರೋಪಗಳೆಲ್ಲ ಸುಳ್ಳೆಂದು ವಾದಿಸುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಬಸವರಾಜ ಕುಂದಗೋಳಮಠ, ಎಂ.ಆರ್. ಪಾಟೀಲ, ಎಸ್.ಐ. ಚಿಕ್ಕನಗೌಡ್ರ, ಈರಣ್ಣ ಜಡಿ, ರವಿ ನಾಯಕ ಸುದ್ದಿಗೋಷ್ಠಿಯಲ್ಲಿ ಇದ್ದರು.