ಜಿಲ್ಲೆ

ಧಾರವಾಡ-ಬೆಳಗಾವಿ ನೇರ ರೈಲಿನಿಂದ ತ್ರಿವಳಿ ನಗರ ಅಭಿವೃದ್ಧಿ

ಹುಬ್ಬಳ್ಳಿ: ಕಿತ್ತೂರು ಮಾರ್ಗವಾಗಿ ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗಕ್ಕೆ ಕೇಂದ್ರ ಬಜೆಟ್​ನಲ್ಲಿ ನೀಡಿರುವ ಅನುಮತಿಯಿಂದಾಗಿ ರೈಲು ಪ್ರಯಾಣಿಕರಿಗೆ ಕನಿಷ್ಠ 3 ತಾಸುಗಳ ಸಮಯದ ಉಳಿತಾಯವಾಗಲಿದೆ.

ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗಕ್ಕೆ ಇದ್ದ ಬಹುದಿನಗಳ ಬೇಡಿಕೆ ಈಡೇರಿದಂತಾಗಿದ್ದು, ಇದರಿಂದಾಗಿ ಲೋಂಡಾ ಜಂಕ್ಷನ್ ಸುತ್ತಿ ಪ್ರಯಾಣಿಸುವುದು ತಪ್ಪಿದಂತಾಗಿದೆ.

ಸುರೇಶ ಅಂಗಡಿ ರೈಲ್ವೆ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಈ ಮಾರ್ಗದ ಸಮೀಕ್ಷೆಗಾಗಿ 2019ರ ಆಗಸ್ಟ್​ನಲ್ಲಿ ನಿರ್ದೇಶನ ನೀಡಿದ್ದರು. 2013-14ರಲ್ಲಿಯೂ ಈ ಮಾರ್ಗದ ಸಮೀಕ್ಷೆ ಕಾರ್ಯ ನಡೆದಿದ್ದರೂ ರೈಲ್ವೆ ಮಂಡಳಿ ಅನುಮೋದನೆ ನೀಡಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಸಮೀಕ್ಷೆ ನಡೆಸಲಾಯಿತು. 2 ವರ್ಷಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದು ದಾಖಲೆ.

ಕ್ಯಾರಕೊಪ್ಪ, ಕಿತ್ತೂರ, ಎಂ.ಕೆ. ಹುಬ್ಬಳ್ಳಿ, ಬಾಗೇವಾಡಿ ಮೂಲಕ ಧಾರವಾಡ -ಬೆಳಗಾವಿ ಮಧ್ಯದ 90 ಕಿಮೀ ಉದ್ದದ ಬ್ರಾಡ್​ಗೇಜ್ ರೈಲು ಮಾರ್ಗದ ವಿಸõತ ಯೋಜನಾ ವರದಿಯನ್ನು 2019ರ ನವೆಂಬರ್​ನಲ್ಲಿ ಸಲ್ಲಿಸಲಾಗಿತ್ತು.

ಒಟ್ಟು 988 ಕೋಟಿ ರೂ. ವೆಚ್ಚದ ಈ ನೂತನ ರೈಲು ಮಾರ್ಗ ಮಧ್ಯೆ 11 ನಿಲ್ದಾಣಗಳು ನಿರ್ವಣಗೊಳ್ಳಲಿವೆ. ಈ ಮಾರ್ಗ ಉತ್ತರ ಕರ್ನಾಟಕದ ಪ್ರಮುಖ ನಗರಗಳಾದ ಹುಬ್ಬಳ್ಳಿ, ಧಾರವಾಡ, ಬೆಳಗಾವಿಯ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ. ಕಿತ್ತೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ರೈಲು ಪರಿಕರ ಕೇಂದ್ರ ನಿರ್ವಿುಸಲು ಯೋಜಿಸಲಾಗಿದೆ.

ಈ ನೂತನ ರೈಲು ಮಾರ್ಗ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಸ್ಮಾರ್ಟ್​ಸಿಟಿ ಯೋಜನೆಗೂ ಪೂರಕವಾಗಲಿದೆ.

ಮಾರ್ಗ ಮಧ್ಯದ ನಿಲ್ದಾಣಗಳು: ಧಾರವಾಡ, ಕ್ಯಾರಕೊಪ್ಪ, ಮಮ್ಮಿಗಟ್ಟಿ, ತೇಗೂರು, ಕಿತ್ತೂರ, ಹುಲಿಕಟ್ಟಿ, ಎಂ.ಕೆ. ಹುಬ್ಬಳ್ಳಿ, ಬಾಗೇವಾಡಿ, ಕಣವಿಕರವಿನಕೊಪ್ಪ, ದೇಸುರ ಮತ್ತು ಬೆಳಗಾವಿ. ಒಟ್ಟು ಉದ್ದ : 90 ಕಿಮೀ · ನಿರ್ವಣಗೊಳ್ಳುವ ಸೇತುವೆಗಳು : 140 · ಪ್ರಮುಖ ಸೇತುವೆ : ಮಲಪ್ರಭಾ ನದಿಗೆ ಅಡ್ಡವಾಗಿ ನಿರ್ವಣಗೊಳ್ಳಲಿರುವ ಸೇತುವೆ. · ಪ್ರಮುಖ ಸೇತುವೆಗಳು : 11 · ರಸ್ತೆ ಮೇಲ್ಸೇತುವೆ : 15 · ರಸ್ತೆ ಕೆಳಸೇತುವೆ : 71

72.08 ಲಕ್ಷ ರೂ. ದಂಡ ವಸೂಲಿ: ಹುಬ್ಬಳ್ಳಿ ರೈಲ್ವೆ ವಿಭಾಗವು ಜನವರಿಯಲ್ಲಿ ಟಿಕೆಟ್ ರಹಿತ ಪ್ರಯಾಣ ಹಾಗೂ ಶುಲ್ಕ ಪಾವತಿಸದೆ ಲಗೇಜ್ ಕೊಂಡೊಯ್ಯುತ್ತಿದ್ದ 14,910 ಪ್ರಕರಣಗಳನ್ನು ಪತ್ತೆ ಹಚ್ಚಿ, 72.08 ಲಕ್ಷ ರೂ. ದಂಡ ವಸೂಲಿ ಮಾಡಿದೆ.

ಟಿಕೆಟ್ ಪಡೆದು ಪ್ರಯಾಣಿಸುವ ಮೂಲಕ ರೈಲ್ವೆಗೆ ನಷ್ಟ ಮಾಡದಂತೆ ಅಧಿಕಾರಿಗಳು ಪ್ರಯಾಣಿಕರಿಗೆ ಇದೇ ಸಂದರ್ಭದಲ್ಲಿ ಜಾಗೃತಿ ಮೂಡಿಸಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜನವರಿ ಅಂತ್ಯದವರೆಗೆ ಒಟ್ಟು 1,35,065 ಪ್ರಕರಣಗಳನ್ನು ದಾಖಲಿಸಿ 6.6 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದಾಗ ಶೇ. 2.86ರಷ್ಟು ದಂಡ ವಸೂಲಿ ಹೆಚ್ಚಾಗಿದೆ.

ರೈಲು ಸಂಚಾರದ ಅವಧಿ ವಿಸ್ತರಣೆ: ಫೆ. 15ಕ್ಕೆ ಅವಧಿ ಪೂರ್ಣಗೊಳ್ಳಲಿದ್ದ ವಾಸ್ಕೊ ಡ ಗಾಮಾ- ಬೆಳಗಾವಿ - ವಾಸ್ಕೊ ಡ ಗಾಮಾ ಬೈ ವೀಕ್ಲಿ ಪ್ಯಾಸೆಂಜರ್ ವಿಶೇಷ ರೈಲು ಸಂಚಾರವನ್ನು ಫೆ. 21ರಿಂದ ಮಾ. 21ರವರೆಗೆ ವಿಸ್ತರಿಸಲಾಗಿದೆ. ಯಶವಂತಪುರ- ವಾಸ್ಕೊ ಡ ಗಾಮಾ- ಯಶವಂತಪುರ ವಾರದಲ್ಲಿ 5 ದಿನ ಸಂಚರಿಸುವ ತತ್ಕಾಲ್ ಸ್ಪೆಷಲ್ ಎಕ್ಸ್​ಪ್ರೆಸ್ ರೈಲು ಸಂಚಾರವನ್ನು 6 ತಿಂಗಳವರೆಗೆ ವಿಸ್ತರಿಸಲಾಗಿದೆ. ಈ ರೈಲು ಯಶವಂತಪುರದಿಂದ ಮೇ 5 ರಿಂದ ನ. 6ರವರೆಗೆ ಮತ್ತು ವಾಸ್ಕೊ ಡ ಗಾಮಾದಿಂದ ಮೇ 10 ರಿಂದ ನ. 10ರವರೆಗೆ ಸಂಚರಿಸಲಿದೆ.

ಸಂಚಾರ ರದ್ದು: ಗದಗನಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಈ ಮಾರ್ಗದ ವಿವಿಧ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. 8 ರಂದು ಹುಬ್ಬಳ್ಳಿ- ಸೊಲ್ಲಾಪುರ ಪ್ಯಾಸೆಂಜರ್, ಧಾರವಾಡ- ಸೊಲ್ಲಾಪುರ ಪ್ಯಾಸೆಂಜರ್, ಹುಬ್ಬಳ್ಳಿ- ಗಂಗಾವತಿ- ಹುಬ್ಬಳ್ಳಿ ಪ್ಯಾಸೆಂಜರ್, 9ರಂದು ಸೊಲ್ಲಾಪುರ- ಧಾರವಾಡ ಪ್ಯಾಸೆಂಜರ್, ಸೊಲ್ಲಾಪುರ- ಹುಬ್ಬಳ್ಳಿ ರೈಲುಗಳ ಸಂಚಾರ ರದ್ದುಗೊಂಡಿದೆ.