ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ ಕರೊನಾ ಕೆಳಮುಖ

ಧಾರವಾಡ: ಜಿಲ್ಲೆಯಲ್ಲಿ ಮೇಲ್ಮುಖವಾಗಿಯೇ ಸಾಗುತ್ತಿದ್ದ ಕರೊನಾ ಪ್ರಕರಣಗಳ ಸಂಖ್ಯೆ ಎರಡು ದಿನದಿಂದ ಕೆಳಮುಖವಾಗಿದ್ದು, ಸರ್ಕಾರ ತೆಗೆದುಕೊಂಡ ಕ್ರಮಗಳು, ಸಾರ್ವಜನಿಕರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಭಾವಿಸಲಾಗಿದೆ.

ಜಿಲ್ಲೆಯಲ್ಲಿ ಸೋಮವಾರ 157 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 6131ಕ್ಕೇರಿದೆ. ಈವರೆಗೆ 3517 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2417 ಪ್ರಕರಣಗಳು ಸಕ್ರಿಯವಾಗಿವೆ. 44 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 197ಕ್ಕೇರಿದೆ.

ಸೋಮವಾರ ಪ್ರಕಟವಾದ ಪ್ರಯೋಗಾಲಯ ವರದಿಯಲ್ಲಿ ನಿತ್ಯದಂತೆ ಹುಬ್ಬಳ್ಳಿಯೇ ಮತ್ತೆ ಸಿಂಹಪಾಲು ಪಡೆದಿದೆ. ಹುಬ್ಬಳ್ಳಿ ಶಹರ ಹಾಗೂ ತಾಲೂಕಿನ ಗ್ರಾಮಾಂತರ ಸೇರಿ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಕೆಲವು ಕಡೆ ಒಂದಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.

ಧಾರವಾಡ ಹಾಗೂ ತಾಲೂಕಿನ ಗ್ರಾಮಾಂತರ ಸೇರಿ 30 ಪ್ರದೇಶಗಳಲ್ಲಿ ಪ್ರಕರಣಗಳು ದೃಢಪಟ್ಟಿವೆ. ಕೆಲ ಪ್ರದೇಶಗಳಲ್ಲಿ ನಿತ್ಯವೂ ಪ್ರಕರಣಗಳು ಕಂಡುಬರುತ್ತಿವೆ.

ಉಳಿದಂತೆ ಅಳ್ನಾವರದ ಮನಕಪುರ, ಬೆಣಚಿ, ಜಯಚಾಮರಾಜ ರಸ್ತೆ, ಕಲಘಟಗಿ ತಾಲೂಕಿನ ದುಮ್ಮವಾಡ, ಕಾಡನಕೊಪ್ಪ, ಮಡಕಿಹೊನಳ್ಳಿ, ಜಿನ್ನೂರ, ಬಸವೇಶ್ವರನಗರ, ಎಪಿಎಂಸಿ ಸಮೀಪ, ತುಮರಿಕೊಪ್ಪ, ಕುಂದಗೋಳ ತಾಲೂಕಿನ ರಾಮನಕೊಪ್ಪ, ಶರೇವಾಡ, ತರ್ಲಘಟ್ಟ, ಸಂಶಿ, ಗುಡಗೇರಿ ಚಲವಾದಿ ಓಣಿ, ದೊಡ್ಡಮಲಪ್ಪನವರ ಓಣಿ, ರೊಟ್ಟಿಗವಾಡ ವೀರಭದ್ರ ದೇವಾಲಯ, ಮೈಲಾರ ಗುಡಿ, ನವಲಗುಂದ ತಾಲೂಕಿನ ಹುಲಕೇರಿ, ನವಲಗುಂದ ಓಣಿ, ಬ್ಯಾಲ್ಯಾಳ, ಅರೇಕುರಟ್ಟಿಯಲ್ಲಿ ಸೋಂಕು ಪತ್ತೆಯಾಗಿವೆ.

ಅಕ್ಕಪಕ್ಕದ ಜಿಲ್ಲೆಗಳ ಏಳೆಂಟು ಜನರು ಕಿಮ್ಸ್​ಗೆ ದಾಖಲಾಗಿದ್ದಾರೆ.

ಡಿಸಿ ಕಚೇರಿ ಪ್ರವೇಶಿಸಿದ ವೈರಸ್

ಇಷ್ಟು ದಿನಗಳ ಕಾಲ ಜಿಲ್ಲೆಯ ವಿವಿಧ ಇಲಾಖೆಗಳ ಕಚೇರಿಗೆ ವಕ್ಕರಿಸಿದ್ದ ಕರೊನಾ, ಇದೀಗ ಜಿಲ್ಲಾಧಿಕಾರಿ ಕಚೇರಿಗೂ ಎಂಟ್ರಿ ಕೊಟ್ಟಿದೆ. ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗೆ ಕರೋನಾ ಪರೀಕ್ಷೆ ನಡೆಸಲಾಗಿತ್ತು. ಆ ಪೈಕಿ 5 ಜನ ಸಿಬ್ಬಂದಿಗೆ ಸೋಮವಾ ಕರೊನಾ ಸೋಂಕು ಪತ್ತೆಯಾಗಿದೆ. ಕೂಡಲೆ ಇಡೀ ಕಚೇರಿ, ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದ್ದು, 2 ದಿನಗಳ ಕಾಲ ಜಿಲ್ಲಾಧಿಕಾರಿ ಕಚೇರಿ ಸೀಲ್​ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕರೊನಾ ಸೇನಾನಿಗಳಿಗೆ ಸೋಂಕು

ಹುಬ್ಬಳ್ಳಿ: ಕಮರಿಪೇಟ ಪೊಲೀಸ್ ಠಾಣೆಯ ಇಬ್ಬರು ಕರೊನಾ ಸೇನಾನಿಗಳಿಗೆ ಸೋಮವಾರ ಕರೊನಾ ಸೋಂಕು ದೃಢಪಟ್ಟಿದೆ. ಓರ್ವ ಎಎಸ್​ಐ ಮತ್ತು ಕಾನ್ಸ್​ಟೇಬಲ್​ಗೆ ವೈರಸ್ ತಗುಲಿದೆ. ಸದ್ಯ ಅವರು ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಶನ್​ನ ಕೋವಿಡ್ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.

EndFragment