ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ 299 ಪಾಸಿಟಿವ್

ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ 299 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 10,452ಕ್ಕೆ ಏರಿದೆ. ಇದುವರೆಗೆ 7812 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ. 75ಕ್ಕಿಂತ ಜಾಸ್ತಿ ಇದೆಯಾದರೂ, ಸೋಂಕಿತರು ನಿನ್ನೆಗಿಂತ ಇಂದು ಜಾಸ್ತಿ ಎಂಬಂತೆ ಇರುವುದು ಎಚ್ಚರಿಕೆ ಗಂಟೆಯೂ ಆಗಿದೆ.

2342 ಪ್ರಕರಣಗಳು ಸಕ್ರಿಯವಾಗಿವೆ. ಸದ್ಯ 74 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರದ ವರದಿಯಲ್ಲಿ ಮತ್ತೆ 9 ಜನರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಕರೊನಾದಿಂದ ಸಾವಿಗೀಡಾದವರ ಸಂಖ್ಯೆ 298ಕ್ಕೆ ಜಿಗಿದಿದೆ.

ಪ್ರಯೋಗಾಲಯ ವರದಿಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಹೆಚ್ಚು ಕಡಿಮೆ ಸಮಾನ ಪ್ರಕರಣಗಳು ಪತ್ತೆಯಾಗಿವೆ. ಧಾರವಾಡ ನಗರ-ಗ್ರಾಮಾಂತರ ಸೇರಿ 68 ಕಡೆಗಳಲ್ಲಿ ಕರೊನಾ ಸೋಂಕು ಕಂಡುಬಂದಿದೆ. ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ ತಾಲೂಕು ಸೇರಿ 69 ಪ್ರದೇಶದಲ್ಲಿ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ. ಶಹರ ಪ್ರದೇಶದಲ್ಲೇ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.

ಕಲಘಟಗಿ ತಾಲೂಕಿನ ಸೋಲಾರಗೊಪ್ಪ; ನವಲಗುಂದ ತಾಲೂಕಿನ ನಾಗರಹಳ್ಳಿ, ಮಿಲಿಟರಿ ಕಾಲನಿ, ಶಿಶುವಿನಹಳ್ಳಿ, ಕೊಂಗವಾಡದ ಗುಡಿ ಓಣಿ; ಕುಂದಗೋಳ ತಾಲೂಕಿನ ಚಿಕ್ಕಹರಕುಣಿ, ಹರ್ಲಾಪುರ ಗೌರಿ ಓಣಿ, ಸಂಕ್ಲೀಪುರ, ದ್ಯಾವನೂರ ಗ್ರಾಮದ ಗೌಡರ ಓಣಿ; ಅಣ್ಣಿಗೇರಿಯ ಶಾದಿ ಮಹಲ್ ಬಳಿ ಕರೊನಾ ಸೋಂಕಿತರು ಕಂಡುಬಂದಿದ್ದಾರೆ. ಗದಗ, ಬಾಗಲಕೋಟೆ, ಉತ್ತರ ಕನ್ನಡ ಮತ್ತಿತರ ಜಿಲ್ಲೆಗಳ ಕೆಲವು ಪ್ರಕರಣಗಳೂ ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿವೆ.