ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ 17 ಕರೊನಾ (ಕೋವಿಡ್) ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಹೊಸದಾಗಿ ಕರೊನಾ ದೃಢಪಟ್ಟವರಲ್ಲಿ ಧಾರವಾಡ ಜಿಲ್ಲೆ ಮಾತ್ರವಲ್ಲದೇ, ಬೇರೆ ಕಾಯಿಲೆಗಾಗಿ ಚಿಕಿತ್ಸೆಗೆಂದು ಬಂದಿರುವ ಅಕ್ಕಪಕ್ಕದ ಜಿಲ್ಲೆಯವರೂ ಸೇರಿದ್ದಾರೆ.
ಜೂ. 28ರಂದು ಸೋಂಕು ದೃಢಪಟ್ಟಿದ್ದ ಹಾವೇರಿ ಜಿಲ್ಲೆ ಹಾನಗಲ್ ನಿವಾಸಿಯ ಸಂಪರ್ಕ ಹೊಂದಿದ್ದ 70 ವರ್ಷದ ವ್ಯಕ್ತಿಗೆ, ಜೂ. 26ರಂದು ಸೋಂಕು ಪತ್ತೆಯಾಗಿದ್ದ ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ 25 ವರ್ಷದ ಮಹಿಳೆಯಿಂದ ನವಜಾತ ಶಿಶುವಿಗೆ ಸೋಂಕು ತಗುಲಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರಯಾಣ ಹಿನ್ನೆಲೆ ಹೊಂದಿರುವ ಹುಬ್ಬಳ್ಳಿ ಭವಾನಿ ನಗರ ಕಲಬುರ್ಗಿ ಗಾಲ್ಪ್ವೀವ್ ಅಪಾರ್ಟ್ವೆುಂಟ್ನ 55 ವರ್ಷದ ಪುರುಷ, ಹುಬ್ಬಳ್ಳಿ ನೆಹರು ನಗರ ವಿಘ್ನೇಶ್ವರ ಅಪಾರ್ಟ್ವೆುಂಟ್ನ 30 ವರ್ಷದ ಮಹಿಳೆ, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ 65 ವರ್ಷದ ಮಹಿಳೆ, ಕಲಬುರಗಿ ಜಿಲ್ಲೆ ಪ್ರಯಾಣ ಹಿನ್ನೆಲೆ ಹೊಂದಿರುವ ಹುಬ್ಬಳ್ಳಿ ಗೋಕುಲ ರಸ್ತೆಯ 47 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ ಹಳೇಹುಬ್ಬಳ್ಳಿ ಬುಲ್ಡೋಜರ್ ನಗರ ಕೋಲೆಕಾರ ಪ್ಲಾಟ್ನ 9 ತಿಂಗಳು ಮಗು, ಧಾರವಾಡ ತಾಲೂಕು ಸೋಮಾಪುರದ 38 ವರ್ಷದ ಪುರುಷ, ಹುಬ್ಬಳ್ಳಿ ತಬೀಬ್ ಪ್ಲಾಟ್ ಲಕ್ಷೆ್ಮೕಶ್ವರ ಚಾಳದ 31 ವರ್ಷದ ಪುರುಷ ಹಾಗೂ ಧಾರವಾಡದ ಅರಣ್ಯ ಇಲಾಖೆ ವಸತಿಗೃಹದ ನಿವಾಸಿ 36 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಧಾರವಾಡ ತಾಲೂಕು ಲಕಮಾಪುರದ 62 ವರ್ಷದ ಮಹಿಳೆ, ಹಾವೇರಿ ಜಿಲ್ಲೆ ಸವಣೂರ ತಾಲೂಕು ಕಲಿವಾಳ ಗ್ರಾಮದ 25 ವರ್ಷದ ಪುರುಷ, ಹಾವೇರಿ ಜಿಲ್ಲೆಯ 65 ವರ್ಷದ ಮಹಿಳೆ, ಗದಗ ಬೆಟಗೇರಿ ಬಾಸೆಲ್ ಮಿಷನ್ ಕಾಂಪೌಂಡ್ನ 55 ವರ್ಷದ ಪುರುಷ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸೋಮನಾಳ ನಿವಾಸಿ 58 ವರ್ಷದ ಮಹಿಳೆಯಲ್ಲಿ ಸೋಂಕು ತಗುಲಿದ್ದು, ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರೊನಾ ಗೆದ್ದವರ ಬಿಡುಗಡೆ: ಕರೊನಾ ಗೆದ್ದಿರುವ ವಿವಿಧ ವಯೋಮಾನದವರನ್ನು ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆ ಮಾಡಲಾಗಿದೆ. 27 ವರ್ಷದ ಮಹಿಳೆ, 72 ವರ್ಷದ ಮಹಿಳೆ, 43 ವರ್ಷದ ಪುರುಷ, 30 ವರ್ಷದ ಪುರುಷ, 35 ವರ್ಷದ ಮಹಿಳೆ, 40 ವರ್ಷದ ಪುರುಷ, ಹಾಗೂ 45 ವರ್ಷದ ಪುರುಷ ಬಿಡುಗಡೆಯಾಗಿದ್ದಾರೆ.
ಇಬ್ಬರನ್ನು ಬಲಿ ಪಡೆದ ಕರೊನಾ: ಧಾರವಾಡ ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ ಮತ್ತೆ ಇಬ್ಬರು ಮೃತಪಟ್ಟಿರುವುದು ಮಂಗಳವಾರ ದೃಢಪಟ್ಟಿದೆ. ಇದರಿಂದ, ಕರೊನಾ ಪೀಡಿತರ ಸಾವಿನ ಸಂಖ್ಯೆ 8ಕ್ಕೆ ಏರಿದೆ.
ನವಲಗುಂದ ತಾಲೂಕಿನ ಮೊರಬ ಗ್ರಾಮದ 83 ವರ್ಷದ ಪುರುಷ ಹಾಗೂ ಹುಬ್ಬಳ್ಳಿ ಮಂಟೂರ ರಸ್ತೆಯ 69 ವರ್ಷದ ಪುರುಷ ಕೊರನಾದಿಂದ ಮೃತಪಟ್ಟಿರುವುದು ಮಂಗಳವಾರ ಖಚಿತವಾಗಿದೆ.
ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮೊರಬ ಗ್ರಾಮದ ವ್ಯಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಜೂ. 25ರಂದು ಸೋಂಕು ದೃಢಪಟ್ಟಿದ್ದರಿಂದ ಕಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಮಂಗಳವಾರ ಮೃತಪಟ್ಟಿದ್ದಾರೆ.
ಹುಬ್ಬಳ್ಳಿ ಮಂಟೂರ ರಸ್ತೆಯ ವ್ಯಕ್ತಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಜೂ. 27ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅದೇ ದಿನ ಮೃತಪಟ್ಟಿದ್ದು, ಕರೊನಾ ಸೋಂಕು ತಗುಲಿರುವುದು ಜೂ. 30ರಂದು ದೃಢಪಟ್ಟಿದೆ.
ಸರ್ಕಾರದ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
626 ಶಂಕಿತರು ಪತ್ತೆ: ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 626 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಿದವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಸೋಮವಾರ ಇದ್ದ 25,887 ನಿಗಾವಹಿಸಿದವರ ಸಂಖ್ಯೆ ಮಂಗಳವಾರ 26,516ಕ್ಕೆ ಏರಿಕೆಯಾಗಿದೆ.
ಈವರೆಗೆ ಜಿಲ್ಲೆಯಲ್ಲಿ 25,300 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 24,181ಜನರ ವರದಿ ನೆಗೆಟಿವ್ ಬಂದಿವೆ. 345 ಪ್ರಕರಣಗಳು ಪಾಸಿಟಿವ್ ಬಂದಿದ್ದು, 151 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 186 ಜನರು ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 8 ಜನ ಮೃತಪಟ್ಟಿದ್ದಾರೆ. ಇನ್ನೂ 960 ವರದಿಗಳು ಬರಬೇಕಿದೆ.
ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 26,516 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 3316 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆ ಪ್ರತ್ಯೇಕ ವಾರ್ಡ್ಗಳಲ್ಲಿ 151 ಜನ ದಾಖಲಾಗಿದ್ದಾರೆ. 3,911 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 19,138 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ.
ಕಳ್ಳತನ ಆರೋಪಿಗೆ ವೈರಾಣು: ಕಳ್ಳತನ ಆರೋಪದ ಮೇಲೆ ಕಳೆದ ವಾರ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಆರೋಪಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಎಸಿಪಿ, ಇನ್ಸ್ಪೆಕ್ಟರ್ ಸೇರಿ 24 ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಇದರಿಂದ ಠಾಣೆಯ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಾಗಿದೆ.
ನಗರದ ಹಾರ್ಡ್ವೇರ್ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆ ಮುಧೋಳ ಮೂಲದ 55 ವರ್ಷದ ಆರೋಪಿಯನ್ನು ಉಪನಗರ ಠಾಣೆ ಪೊಲೀಸರು ಕಳೆದ ವಾರವೇ ವಶಕ್ಕೆ ಪಡೆದಿದ್ದರು. ಜೂನ್ 28ರಂದು ಆತನನ್ನು ಬಂಧಿಸಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಆರೋಪಿಯ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮಂಗಳವಾರ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ.
ಎಸಿಪಿ, ಇನ್ಸ್ಪೆಕ್ಟರ್, ಪಿಎಸ್ಐ ಹಾಗೂ ಸಿಬ್ಬಂದಿ ಆರೋಪಿ ಜತೆ ಫೋಟೋ ತೆಗೆಸಿಕೊಂಡಿದ್ದರು. ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಅಧಿಕಾರಿಗಳು ಸೇರಿ 24 ಜನರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿ, ಹೋಮ್ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ಬಂಧನದ ಬಳಿಕ ಕೋವಿಡ್ ಪರೀಕ್ಷೆ ಮಾಡಿಸದೇ ಕೊಠಡಿಯೊಂದರಲ್ಲಿ ಇರಿಸಲಾಗಿತ್ತು. ಆ ಕೊಠಡಿಯಲ್ಲಿ ಮತ್ತೋರ್ವ ಆರೋಪಿ ಇದ್ದ ಎಂಬ ಮಾತೂ ಕೇಳಿಬಂದಿದೆ.
ಸಂಪೂರ್ಣ ಪೊಲೀಸ್ ಠಾಣೆಯನ್ನು ಎರಡು ಬಾರಿ ಸ್ಯಾನಿಟೈಸೇಷನ್ ಮಾಡಲಾಗಿದೆ. ಉಪನಗರ ಪೊಲೀಸ್ ಠಾಣೆ ಕಟ್ಟಡದಲ್ಲಿ ಉತ್ತರ ಉಪ ವಿಭಾಗ ಎಸಿಪಿ ಕಚೇರಿ, ಮಹಿಳಾ ಪೊಲೀಸ್ ಠಾಣೆ, ಟ್ರಾಫಿಕ್ ಮ್ಯಾನೇಜ್ವೆುಂಟ್ ಕಂಟ್ರೋಲ್ ರೂಮ್ ಸಹ ಇದ್ದು, ಆ ಕಚೇರಿಗಳ ಸಿಬ್ಬಂದಿಯಲ್ಲೂ ಆತಂಕ ಶುರುವಾಗಿದೆ.
ಮಿನಿ ವಿಧಾನಸೌಧ ಇಂದಿನಿಂದ ಕಾರ್ಯಾರಂಭ: ಹುಬ್ಬಳ್ಳಿ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಪಂಚಾಯಿತಿಯ 27 ವರ್ಷದ ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ)ನಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಳವಾರ ಮಿನಿ ವಿಧಾನಸೌಧದ ಎಲ್ಲ ಕಚೇರಿಗಳಿಗೆ ರಜೆ ಘೊಷಿಸಲಾಗಿತ್ತು. ಬುಧವಾರ ಎಲ್ಲ ಕಚೇರಿಗಳು ಎಂದಿನಂತೆ ಕಾರ್ಯಾರಂಭ ಮಾಡಲಿವೆ.
ಮಿನಿ ವಿಧಾನಸೌಧದಲ್ಲಿ ಹುಬ್ಬಳ್ಳಿ ಶಹರ, ಗ್ರಾಮೀಣ ತಹಸೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣ ಪೊಲೀಸ್ ಠಾಣೆ, ವಾರ್ತಾ ಇಲಾಖೆ, ಭೂ ಮಾಪನ ಇಲಾಖೆ ಸೇರಿ ಹತ್ತಾರು ಇಲಾಖೆ ಕಚೇರಿಗಳಿದ್ದು, ನಿತ್ಯ ನೂರಾರು ಸಿಬ್ಬಂದಿ, ಸಾವಿರಾರು ಜನ ಇಲ್ಲಿಗೆ ಬಂದು ಹೋಗುತ್ತಾರೆ. ಸೋಮವಾರ ಸೋಂಕು ದೃಢವಾಗಿದ್ದರೂ ಅನಿವಾರ್ಯವಾಗಿ ಎಲ್ಲ ಸಿಬ್ಬಂದಿ ಕೆಲಸ ಮುಂದುವರಿಸಿದ್ದರು. ಎರಡು ಬಾರಿ ಸ್ಯಾನಿಟೈಸೇಷನ್ ಮಾಡಿ 24 ಗಂಟೆಗಳ ಕಾಲ ನಿಗಾ ಇಡಲಾಗಿತ್ತು. ಹಾಗಾಗಿ, ಮಂಗಳವಾರ ಎಲ್ಲ ಕಚೇರಿಗಳನ್ನು ಬಂದ್ ಮಾಡಲಾಗಿತ್ತು. ಬುಧವಾರದಿಂದ ಎಂದಿನಂತೆ ಎಲ್ಲ ಕಚೇರಿಗಳು ಕಾರ್ಯ ನಿರ್ವಹಿಸಲಿವೆ ಎಂದು ಹುಬ್ಬಳ್ಳಿ ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ ‘ವಿಜಯವಾಣಿ’ಗೆ ತಿಳಿಸಿದ್ದಾರೆ.