ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಐಐಐಟಿ ದೇಶಕ್ಕೆ ವಿಶೇಷ ಕೊಡುಗೆಯನ್ನು ನೀಡಲಿದೆ. ಇದನ್ನು ಹೆಮ್ಮೆಯಿಂದ ಹೇಳುವೆ. ಇಲ್ಲಿನ ವಿದ್ಯಾರ್ಥಿಗಳು ದೇಶ- ವಿದೇಶಗಳ ಪ್ರತಿಷ್ಠಿತ ಕಂಪನಿ, ಸಂಸ್ಥೆಗಳಲ್ಲಿ ಕೆಲಸ ಮಾಡಿ ಬೆಳೆಯಲಿ ಎಂದು ರಾಷ್ಟ್ರಪತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ನಗರದ ತಡಸಿನಕೊಪ್ಪದಲ್ಲಿ ನಿರ್ಮಿಸಿದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ) ನೂತನ ಕ್ಯಾಂಪಸ್‌ನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019ರಲ್ಲಿ ಐಐಐಟಿಯ ಶಿಲಾನ್ಯಾಸ ನೆರವೇರಿಸಿದ್ದರು. ಈಗ ಶಾಶ್ವತ ಕ್ಯಾಂಪಸ್ ತಲೆಎತ್ತಿನಿಂತಿದೆ. ಐಐಐಟಿಯ ೋಷವಾಕ್ಯ ‘ಜ್ಞಾನವಿಕಾಸ’ ಎಂದಿದೆ. ಜ್ಞಾನದಲ್ಲಿಯೇ ವಿಕಾಸ ಅಡಗಿದೆ. ಭಾರತವನ್ನು ವಿಶ್ವಗುರು ಮಾಡುವ ದಿಸೆಯಲ್ಲಿ ಜ್ಞಾನದ ವಿಕಾಸ ಆಗಬೇಕು. ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಕಠಿಣ ಶ್ರಮದಿಂದ ಯಶಸ್ಸು ಗಳಿಸಬೇಕು ಎಂದರು.
ರಾಜ್ಯಪಾಲ ಥಾವರಚಂದ್ ಗೆಹ್ಲೋತ್, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಐಐಐಟಿ ಕಾರ್ಯಾಧ್ಯಕ್ಷೆ ಸುಧಾ ಮೂರ್ತಿ, ಸಚಿವರಾದ ಹಾಲಪ್ಪ ಆಚಾರ, ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಐಐಐಟಿ ನಿರ್ದೇಶಕ ಡಾ. ಕವಿ ಮಹೇಶ, ಕುಲಸಚಿವ ಪ್ರೊ. ಚನ್ನಪ್ಪ ಅಕ್ಕಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.
ರೈತರಿಗೆ ವಂದನೆ: ಧಾರವಾಡ ಐಐಐಟಿ ಸ್ಥಾಪನೆಗೆ ಅಗತ್ಯ ಭೂಮಿ ನೀಡಿದ ರೈತರಿಗೆ ಸಿಎಂ ಬೊಮ್ಮಾಯಿ ಅಭಿನಂದನೆ ತಿಳಿಸಿದರು. ಹಣದಿಂದ ಜ್ಞಾನ ಖರೀದಿಸಲು ಬಾರದು. ರೈತರು ತ್ಯಾಗ ಮಾಡಿದ ಈ ಭೂಮಿಯಲ್ಲಿ ಜ್ಞಾನ ಎಂಬ ಬೀಜ ಬಿತ್ತು ಲೋಕಕಲ್ಯಾಣ ಎಂಬ ಸಲು ಬೆಳೆಯಲು ರೈತರು ನೆರವಾಗಿದ್ದಾರೆ ಎಂದು ಮನದುಂಬಿ ಹೊಗಳಿದರು.