ವಿಕ್ರಮ ನಾಡಿಗೇರ ಧಾರವಾಡ
ಶಿಕ್ಷಣದ ಜತೆಗೆ ಸಾಂಸ್ಕೃತಿಕ ನಗರವಾಗಿ ಸಹ ಶ್ರೀಮಂತಿಕೆ ಹೊಂದಿರುವ ಜಿಲ್ಲೆಗೆ ‘ಧಾರವಾಡ ಉತ್ಸವ’ ಹೊಸ ಮೆರಗು ನೀಡಿತ್ತು. ಆದರೆ ಬರಗಾಲ, ಅತಿವೃಷ್ಟಿ, ಕೋವಿಡ್ ಹೀಗೆ ಹತ್ತು ಹಲವು ಕಾರಣಗಳಿಂದ ಅನೇಕ ವರ್ಷಗಳಿಂದ ಉತ್ಸವ ನಡೆದಿಲ್ಲ. ಈ ಬಾರಿಯಾದರೂ ಸರ್ಕಾರ ಉತ್ಸವ ನಡೆಲು ಮುಂದಾಗುವುದೇ ಎಂಬ ನಿರೀಕ್ಷೆ ಜನರಲ್ಲಿದೆ.
2008ರಲ್ಲಿ ಸಂಸ್ಕೃತಿ ಸಮಾಗಮ ಎಂಬ ಘೋಷ ವಾಕ್ಯದೊಂದಿಗೆ ಆರಂಭವಾದ ಉತ್ಸವ ಯಾವುದೇ ಅಡೆತಡೆ ಇಲ್ಲದೆ 7 ವರ್ಷಗಳ ಕಾಲ ನಡೆದಿತ್ತು. ಈ ಸಮಯದಲ್ಲಿ ಸ್ಥಳೀಯ ಕಲಾವಿದರಿಗೆ ಮಾತ್ರವಲ್ಲದೆ ವಿವಿಧ ಜಿಲ್ಲೆಗಳ ಕಲಾವಿದರಿಗೂ ವೇದಿಕೆ ಕಲ್ಪಿಸಿ ಅವರ ಜೀವನಕ್ಕೆ ಆಸರೆಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಬರಗಾಲ, ಅತಿವೃಷ್ಟಿ, ಕೋವಿಡ್ ಹೆಸರಿನಲ್ಲಿ ಉತ್ಸವ ನಡೆದಿಲ್ಲ.
2014ರಲ್ಲಿ ನಡೆದಿದ್ದೇ ಕೊನೇ ಉತ್ಸವ. ನಂತರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಒಂದಿಲ್ಲ ಒಂದು ನೆಪ ಹೇಳಿ ಉತ್ಸವಕ್ಕೆ ಕೊಕ್ಕೆ ಹಾಕಿರುವುದು ಕಲಾವಿದರಲ್ಲಿ ಬೇಸರ ಮೂಡಿಸಿದೆ. ಹೊಸ ಹೊಸ ಪ್ರತಿಭೆಗಳ ಅನಾವರಣಕ್ಕೆ ಉತ್ಸವ ಒಂದೊಳ್ಳೆ ವೇದಿಕೆಯಾಗಿತ್ತು. ಇದರ ಜತೆಗೆ ಕಲಾ ತಂಡಗಳ ಆರ್ಥಿಕತೆಗೂ ಅನುಕೂಲವಾಗಿತ್ತು.
ಧಾರವಾಡ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಉತ್ಸವಗಳು ಸಂಭ್ರಮದಿಂದಲೇ ನಡೆಯುತ್ತಿವೆ. ಇಲ್ಲಿ ಉತ್ಸವ ನಡೆಸಲು ಸ್ಥಳೀಯ ಜನಪ್ರತಿನಿಧಿಗಳಿಗೆ ಆಸಕ್ತಿ ಇಲ್ಲವೇ? ಎಂಬ ಪ್ರಶ್ನೆ ಮೂಡಿದೆ. ಕೋವಿಡ್‌ಗೂ ಪೂರ್ವದ ವರ್ಷಗಳಲ್ಲಿ ಉತ್ಸವ ನಡೆಸುವಂತೆ ಸರ್ಕಾರಕ್ಕೆ ಕಲಾವಿದರು ಪ್ರತಿ ವರ್ಷ ಮನವಿ ಸಲ್ಲಿಸುತ್ತಲೇ ಇದ್ದರೂ ಸರ್ಕಾರ ಮಾತ್ರ ಸಕಾರಾತ್ಮಕವಾಗಿ ಸ್ಪಂದನೆ ನೀಡದಿರುವುದು ಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಹೇಳುತ್ತಲೇ ಜಿಲ್ಲಾಡಳಿತ ಕಾಲ ಕಳೆಯುತ್ತಿದೆ. ಈ ಹಿಂದೆ ಹಲವು ಬಾರಿ ಸರ್ಕಾರದ ಅನುದಾನ ಮಾತ್ರವಲ್ಲದೆ ಖಾಸಗಿ ಸಂಸ್ಥೆ-ಕಂಪನಿಗಳು, ಜನರ ಸಹಭಾಗಿತ್ವದಲ್ಲಿ ಅದ್ಧೂರಿಯಾಗಿ ಉತ್ಸವ ನಡೆಸಿದ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ಜಿಲ್ಲಾಡಳಿತ ಸರ್ಕಾರದ ಅನುದಾನ ನೆಚ್ಚದೆ ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಉತ್ಸವ ಮಾಡಲಿ ಎಂಬುದು ಕಲಾವಿದರ ಆಗ್ರಹ.
ಹು-ಧಾ ಅವಳಿನಗರದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ಉತ್ಸವದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳ ಅನಾವರಣ ಆಗಿದೆ. ಇಂತಹ ಇನ್ನಷ್ಟು ಪ್ರತಿಭೆಗಳನ್ನು ಹೊರತರಲು ಉತ್ಸವ ನಡೆಸಲು ಸೂಕ್ತ ಸಮಯ. ಸದ್ಯ ಎಲ್ಲ ಸಂಕಷ್ಟಗಳು ದೂರವಾಗಿದೆ. ಹೀಗಾಗಿ ಈ ವರ್ಷ ಉತ್ಸವ ನಡೆಸುವ ಮೂಲಕ ಜನರಲ್ಲಿ ಉತ್ಸಾಹ ತುಂಬಲು ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.
----ಕೋಟ್-----
ಧಾರವಾಡ ಉತ್ಸವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅದ್ಧೂರಿ ಉತ್ಸವ ನಡೆಸಲು ಸುಮಾರು 7-8 ಕೋಟಿ ರೂ. ಅನುದಾನ ಬೇಕು. ಸರ್ಕಾರ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿ ಅನುದಾನ ಬಿಡುಗಡೆಗೆ ಮಾಡಿದರೆ ಉತ್ಸವ ನಡೆಸಬಹುದು. ಆದರೆ ಸರ್ಕಾರ ಉತ್ಸವ ನಡೆಸುವ ಕುರಿತು ಯಾವುದೇ ಸೂಚನೆ ನೀಡಿಲ್ಲ.
*ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ