ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು ಜಿಲಾ ್ಲೇಂದ್ರ ವಧುವಿನಂತೆ ಸಿಂಗಾರಗೊಂಡಿದೆ. ನಗರದ ಎಂಜಿ ರಸ್ತೆ ಪ್ರಾವಿಜನ್ಸ್ ಸ್ಟೋರ್ ಒಂದರಲ್ಲಿ ಕೇಸರಿ, ಬಿಳಿ, ಹಸಿರು ಧಾನ್ಯಗಳಿಂದ ತಿರಂಗಾ ಕಲಾಕೃತಿ ರಚಿಸಿರುವುದು ಗ್ರಾಹಕರ ಗಮನ ಸೆಳೆದಿದೆ. ಹೂವಿನ ಅಂಗಡಿಯೊಂದರಲ್ಲಿ ತಿರಂಗಾ ಬಣ್ಣದಲ್ಲಿ ಹೂ ಮಾರಾಟ ಮಾಡುತ್ತಿರುವುದು ವಿಶೇಷವಾಗಿದೆ. ಬಸವನಹಳ್ಳಿ ಶ್ರೀ ಶನೇಶ್ವರ ದೇವಾಲಯದಲ್ಲಿ ಬೃಹತ್ ಹಣ್ಣಿನ ಹಾರಕ್ಕೆ ಧ್ಜಜದ ಸ್ಟಿಕ್ಕರ್ ಅಂಟಿಸಿ ದೇವರಿಗೆ ಅರ್ಪಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ, ಎಸ್ಪಿ ಕಚೇರಿ, ನಗರಸಭೆ, ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ರಾತ್ರಿವೇಳೆ ವಿದ್ಯುತ್ ದೀಪ ಝುಗಮಗಿಸುವುದರೊಂದಿಗೆ ನಗರವೇ ಕಂಗೊಳಿಸುತ್ತಿವೆ. ನಗರದ ಪೊಲೀಸ್ ವೃತ್ತದಲ್ಲಿರುವ ಪೊಲೀಸ್ ಪ್ರತಿಮೆ ಸುತ್ತ ರಾಷ್ಟ್ರಧ್ವಜ ಕಟ್ಟಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ನಗರಸಭೆ ಕಟ್ಟಡವನ್ನು ತ್ರಿವರ್ಣ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ಕಾಂಪೌಂಡ್ ಸುತ್ತ ರಾಷ್ಟ್ರಧ್ವಜ ಕಟ್ಟಿ ಅಲಂಕರಿಸಲಾಗಿದೆ.
ಜಿಲ್ಲಾ ನ್ಯಾಯಾಲಯದ ಮುಂಭಾಗದ ಗಾಂಧಿ ಉದ್ಯಾನ, ಹನುಮಂತಪ್ಪ ವೃತ್ತ ಮತ್ತು ಆಜಾದ್ ಪಾರ್ಕ್ ವೃತ್ತವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಹಿರೇಮಗಳೂರು ವೃತ್ತ ಸೇರಿದಂತೆ ವಿವಿಧೆಡೆ ರಾಷ್ಟ್ರಧ್ವಜ ಕಟ್ಟಿ ಅಲಂಕರಿಸಲಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ವೃತ್ತ, ಆಟೋ ನಿಲ್ದಾಣ ಸೇರಿದಂತೆ ವಿವಿಧೆಡೆ ಸ್ವಾತಂತ್ರ್ಯ ಅಮೃತಮಹೋತ್ಸವಕ್ಕೆ ಸಜ್ಜುಗೊಳಿಸಲಾಗಿದೆ. ನಗರದ ಪ್ರತಿ ಮನೆ ಮೇಲೆ ಧ್ವಜ ಕಟ್ಟಲಾಗಿದೆ. ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಂದ ಜಿಲ್ಲಾದ್ಯಂತ 2.23 ಲಕ್ಷಕ್ಕೂ ಹೆಚ್ಚು ತ್ರಿವರ್ಣ ಧ್ವಜಗಳನ್ನು ವಿತರಿಸಲಾಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಗಳ ಮುಂದೆ ರಾಷ್ಟ್ರಧ್ವಜ ಕಟ್ಟಲಾಗಿದೆ. ಆ.15ರಂದು ಸುಭಾಷ್ ಚಂದ್ರಬೋಸ್ ಆಟದ ಮೈದಾನದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಗುವುದು.