ಕಾಗವಾಡ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ಧರ್ಮಾಕಾರಿ ಡಾ.ವೀರೇಂದ್ರ ಹೆಗ್ಗಡೆ ಕುರಿತು ಅಪಪ್ರಚಾರ ಸಲ್ಲ ಹಾಗೂ ಹಿರೇಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಹತ್ಯೆ ಖಂಡನೀಯ ಎಂದು ಉತ್ತರ ಕರ್ನಾಟಕ ಉಪಾಧ್ಯಾಯ ಸಮಿತಿಯ ಅಧ್ಯಕ್ಷ ಬಾಹುಬಲಿ ಉಪಾಧ್ಯೆ ಹೇಳಿದರು.
ತಾಲೂಕಿನ ಶೇಡಬಾಳ ಪಟ್ಟಣದ ಶ್ರೀ ಶಾಂತಿಸಾಗರ ಆಶ್ರಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕ ಉಪಾಧ್ಯಾಯ ಸಮಿತಿಯ ಒಂದು ದಿನದ ಶಿಬಿರದಲ್ಲಿ ಮಾತನಾಡಿ, ಜಗತ್ತಿಗೆ ಅಹಿಂಸಾ ತತ್ವ ಬೋಸಿದ ಜೈನ ಧರ್ಮದ ಮುನಿಗಳ ಹತ್ಯೆ ಹೇಯ ಕೃತ್ಯ. ಮುನಿ ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಧರ್ಮಸ್ಥಳದಲ್ಲಿ ಹತ್ತಾರು ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಜೈನ ಧರ್ಮದ ಮೇರು ವ್ಯಕ್ತಿ ಡಾ.ವೀರೇಂದ್ರ ಹೆಗ್ಗಡೆ ಅವರ ತೇಜೋವಧೆ ಮಾಡಲಾಗುತ್ತಿದೆ. ಕೆಲವರು ಧರ್ಮಸ್ಥಳದ ಹೆಸರು ಕೆಡಿಸುವ ಸಂಚು ಮಾಡುತ್ತಿದ್ದಾರೆ. ಹೆಗ್ಗಡೆಯವರ ತೇಜೋವಧೆ ಮತ್ತು ಧರ್ಮಸ್ಥಳ ಹೆಸರನ್ನು ವಿನಾಕಾರಣ ಎಳೆದು ತರುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನೇಕ ಸಂಘ-ಸಂಸ್ಥೆ ಕಟ್ಟಿ ಶೈಕ್ಷಣಿಕ, ಆರೋಗ್ಯ ಹಾಗೂ ಸಾಮಾಜಿಕವಾಗಿ ಸರ್ವಧರ್ಮೀಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಡಾ.ವೀರೇಂದ್ರ ಹೆಗ್ಗಡೆ ಏಳಿಗೆ ಸಹಿಸದ ಪಟ್ಟಭದ್ರ ಹಿತಾಸಕ್ತಿಗಳು ಸೌಜನ್ಯ ಪ್ರಕರಣದಲ್ಲಿ ಇಂತಹ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿ ಉಪಾಧ್ಯಾಯ ಸಮಿತಿ ಖಂಡಿಸುತ್ತದೆ ಎಂದರು.
ಉಪಾಧ್ಯಾಯರ ಮಕ್ಕಳಿಗೆ ಸಂಸ್ಕೃತ ಪಾಠ ಕಲಿಸುವ ಹಾಗೂ ಇನ್ನಿತರ ಧಾರ್ಮಿಕ ವಿಷಯಗಳ ಕುರಿತು ಹಲವಾರು ನಿರ್ಣಯ ಕೈಗೊಳ್ಳಲಾಯಿತು. ಆಚಾರ್ಯ ಶ್ರೀ ಶಾಂತಿಸಾಗರ ಮುನಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಆಚಾರ್ಯ ಶ್ರೀ ಶಾಂತಿಸೇನ ಮುನಿಗಳು ಸಾನ್ನಿಧ್ಯ ವಹಿಸಿದ್ದರು. ನಂದಗಾಂವದ ಶಾಂತಿನಾಥ ಉಪಾಧ್ಯೆ, ಉಗಾರದ ಭರತ ಉಪಾಧ್ಯೆ, ಚಂದೂರ ಶ್ರೇಣಿಕ ಉಪಾಧ್ಯೆ, ಶೇಡಬಾಳದ ಬಾಹುಬಲಿ ಉಪಾಧ್ಯೆ, ಜುಗೂಳದ ಸಂದೀಪ ಉಪಾಧ್ಯೆ ಸೇರಿ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಉಪಾಧ್ಯಾಯರು ಉಪಸ್ಥಿತರಿದ್ದರು.