ಜಯಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶ ಕೇವಲ ಸಾಲ ನೀಡಿ, ಬ್ಯಾಂಕಿಂಗ್ ವ್ಯವಹಾರ ಮಾಡುವುದಲ್ಲ. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸಾಲದ ರೂಪದಲ್ಲಿ ಹಣದ ನೆರವು ನೀಡಿ ಬದುಕು ಉಜ್ವಲಗೊಳಿಸುವುದಾಗಿದೆ ಎಂದು ಯೋಜನಾಧಿಕಾರಿ ಶ್ರೀಮೂರ್ತಿ ಶೆಟ್ಟಿ ಹೇಳಿದರು.
ಜಯಪುರದಲ್ಲಿ ಬುಧವಾರ ವೇಲಾಯುಧನ್, ರುಕ್ಮಿಣಿ ದಂಪತಿಗೆ ವಾತ್ಸಲ್ಯ ಕಿಟ್ ವಿತರಿಸಿ ಮಾತನಾಡಿದ ಅವರು, ವಿಜಯವಾಣಿ ಪತ್ರಿಕೆಯಲ್ಲಿ ಬಂದ ಇಲ್ಲಿನ ವೃದ್ಧ ದಂಪತಿಯ ಸಮಸ್ಯೆಗಳ ಕುರಿತ ವರದಿ ನೋಡಿ ದಂಪತಿಗೆ ಒಂದು ಸಾವಿರ ರೂ. ಮಾಸಾಶನ ನೀಡಲಾಗುತ್ತಿದೆ. ಇದೀಗ ಪಾತ್ರೆಗಳು, ಬಟ್ಟೆಗಳು ಹಾಗೂ ದಿನಬಳಕೆಯ ವಸ್ತುಗಳನ್ನೊಳಗೊಂಡ ವಾತ್ಸಲ್ಯ ಕಿಟ್ ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ವಾತ್ಸಲ್ಯ ಮನೆಯನ್ನು ದಂಪತಿಗೆ ನಿರ್ಮಿಸಿಕೊಡಲಾಗುವುದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶೃಂಗೇರಿ ಯೋಜನಾ ವ್ಯಾಪ್ತಿಯಲ್ಲಿ ಈ ವರ್ಷ 87 ಜನರಿಗೆ ತಲಾ 1 ಸಾವಿರ ಮಾಸಾಶನ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ 57 ನಿರ್ಗತಿಕ ಬಡವರಿಗೆ ವಾತ್ಸಲ್ಯ ಕಿಟ್ ನೀಡಲಾಗಿದೆ. ಅಲ್ಲದೆ 18 ವಾತ್ಸಲ್ಯ ಮನೆಗಳನ್ನು ನಿರ್ಮಿಸಿಕೊಡಲು ಯೋಜನೆ ರೂಪಿಸಲಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್ ಮಾತನಾಡಿ, ವೀರೇಂದ್ರ ಹೆಗ್ಡೆ ಅವರ ಕನಸಿನ ಯೋಜನೆಯಿಂದಾಗಿ ಲಕ್ಷಾಂತರ ಬಡ ಕುಟುಂಬಗಳು ಜೀವನ ರೂಪಿಸಿಕೊಂಡಿವೆ. ಕಂದಾಯ ಇಲಾಖೆಯ ಅಧಿಕಾರಿಗಳು ಈ ವೃದ್ಧ ದಂಪತಿಯ ಮನೆ ಕುಸಿದು ಬಿದ್ದಾಗ ನೀಡಿದ ತಪ್ಪು ವರದಿಯ ಪರಿಣಾಮ ಇವರಿಗೆ ಮನೆ ಪರಿಹಾರದ ಹಣ ಬಂದಿಲ್ಲ. ಹಾಗಾಗಿ ಈ ಕುಟುಂಬ ಬೀದಿಗೆ ಬಂದಿದೆ ಎಂದರು.
ದಂಪತಿಯ ಸಂಬಂಧಿ ರೇಣುಕಾ ಮಾತನಾಡಿ, ವಿಜಯವಾಣಿ ಪತ್ರಿಕೆಯ ವರದಿ ನೋಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಈ ಕುಟುಂಬಕ್ಕೆ ಸೋಲಾರ್ ಲೈಟ್, ಕಣ್ಣಿನ ಶಸ್ತ್ರಚಿಕಿತ್ಸೆಗೆ ಸಹಾಯಧನ, ಮಾಸಾಶನ ಹಾಗೂ ವಾತ್ಸಲ್ಯ ಕಿಟ್ ವಿತರಿಸಿದ್ದು ಇವರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದಾರೆ. ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಯೋಜನೆಯ ಅಧಿಕಾರಿಗಳು ಮಾಡಿರುವುದು ಶ್ಲಾಘನೀಯ ಎಂದರು.
ವಿಜಯವಾಣಿ ವರದಿಗಾರ ಕಿಬ್ಳಿ ಪ್ರಸನ್ನಕುಮಾರ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿನಯ, ಮೇಲ್ವಿಚಾರಕ ಮನೋಹರ, ಸೇವಾ ಪ್ರತಿನಿಧಿ ವಿಮಲಾ ಇತರರಿದ್ದರು.