ಔರಾದ್ ಶನಿವಾರ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರವನ್ನು ತಹಸೀಲ್ದಾರ್ ಮಹೇಶ ಪಾಟೀಲ್ ಉದ್ಘಾಟಿಸಿದರು. ಪಪಂ ಅಧ್ಯಕ್ಷೆ ಸರೂಬಾಯಿ ಘುಳೆ, ಮುರಳೀಧರ, ಶಿವಾನಂದ ಮೊಕ್ತೆದಾರ್, ಅಶೋಕ ಶೆಂಬೆಳ್ಳಿ, ಶಿವಕುಮಾರ್ ಘಾಟೆ, ಗುಂಡಯ್ಯ ಸ್ವಾಮಿ, ಬಂಡೆಪ್ಪ ಕಂಟೆ, ಶಿವರಾಜ್ ಅಲಮಾಜೆ, ಶಾಲಿವಾನ ಉದಗಿರೆ, ಶರಣಪ್ಪ ಪಾಟೀಲ್, ಸುಧಾಕರ್ ಕೊಳ್ಳುರ್, ರಾಘವೇಂದ್ರ ಗೌಡಾ, ಪ್ರವೀಣ ಕಾರಬಾರಿ, ಶಿವಶರಣಪ್ಪ ವಲ್ಲಾಪುರೆ, ಕಲ್ಲಪ್ಪ ದೇಶಮುಖ ಇದ್ದರು. 
ಜಿಲ್ಲೆ

ಧರ್ಮಸ್ಥಳ ಯೋಜನೆ ಕಾರ್ಯ ಶ್ಲಾಘನೀಯ

ಔರಾದ್: ಮದ್ಯದ ಅಮಲು ಮನಷ್ಯನನ್ನು ವಿನಾಶ ಮತ್ತು ಕೇಡಿನತ್ತ ಕೊಂಡೊಯ್ಯುತ್ತದೆ. ಈ ದುರಾಭ್ಯಾಸದಿಂದ ಮುಕ್ತಿ ದೊರಕಿಸಿ ಕೊಡುವ ಶಿಬಿರಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿ ಬದುಕು ಬಂಗಾರವಾಗಿಸಲು ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಹಸೀಲ್ದಾರ್ ಮಹೇಶ ಪಾಟೀಲ್ ಹೇಳಿದರು.

ಪಟ್ಟಣದ ಶ್ರೀ ಸಾಯಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಚಟಗಳು ಮನುಷ್ಯನನ್ನು ಕುರುಡನ್ನಾಗಿಸುತ್ತವೆ. ಜೀವನವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ಪಡೆದು ಸರ್ವಸ್ವವನ್ನು ಕೆಡಿಸುವ ಶಕ್ತಿ ವ್ಯಸನಕ್ಕಿದೆ. ಮದ್ಯವರ್ಜನ ಶಿಬಿರದಲ್ಲಿ ತನ್ನ ಶಕ್ತಿಯನ್ನು ತಾನೇ ಅರ್ಥಮಾಡಿಕೊಂಡು ಬದುಕುವ ಆತ್ಮ ಸ್ಥೈರ್ಯವನ್ನು ಪಡೆಯಲು ಕಾರ್ಯಕ್ರಮ ರೂಪಿಸುತ್ತಾರೆ. ಇದರಿಂದ ಉತ್ತಮ ಫಲಿತಾಂಶ ಕಾಣಲು ಸಾಧ್ಯ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮುರಳೀಧರ್ ಎಚ್.ಎಲ್. ಮಾತನಾಡಿ, ಅಮಲು ಸೇವನೆ ವಿಶ್ವದ ದೊಡ್ಡ ರೋಗವಾಗಿ ಪರಿಣಮಿಸಿದೆ. ಧರ್ಮಸ್ಥಳ ಮಂಜುನಾಥರ ಆಶೀರ್ವಾದದಿಂದ ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರ ಆಯೋಜನೆ ಮಾಡಿ ಮದ್ಯಪಾನ ಮುಕ್ತವಾಗಿಸುವ ಸಂಕಲ್ಪ ಮಾಡಿ ಪುಣ್ಯದ ಕಾರ್ಯದಲ್ಲಿ ತೊಡಗಿರುವುದು ಉತ್ತಮ ಸಂಗತಿಯಾಗಿದ್ದು, ೮ ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಎಲ್ಲರು ಭಾಗವಹಿಸಬೇಕು ಎಂದರು.

ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಯೋಜನಾಧಿಕಾರಿ ರಾಘವೇಂದ್ರ ಗೌಡ, ಸುಧಾಕರ ಕೊಳ್ಳುರ, ಕಲ್ಲಪ್ಪ ದೇಶಮುಖ ಮಾತನಾಡಿದರು.

ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ತಾಲೂಕು ಅಧ್ಯಕ್ಷ ಅಶೋಕ ಶೆಂಬೆಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷೆ ಸರೂಬಾಯಿ ಘುಳೆ, ಶಿವಾನಂದ ಮೊಕ್ತೆದಾರ್, ಗುಂಡಯ್ಯ ಸ್ವಾಮಿ, ಬಂಡೆಪ್ಪ ಕಂಟೆ, ಶಿವರಾಜ ಅಲಮಾಜೆ, ಶಾಲಿವಾನ ಉದಗಿರೆ, ಶರಣಪ್ಪ ಪಾಟೀಲ್, ಪ್ರವೀಣ ಕಾರಬಾರಿ, ಶಿವಶರಣಪ್ಪ ವಲ್ಲಾಪುರೆ, ರಾಜೇಶ, ನಂದಕುಮಾರ, ಪ್ರೇಶಿಲ್ಲಾ ಡಿಸೋಜಾ, ವಿಲಾಸ ಪೂಜಾರಿ, ಮಲ್ಲಿಕಾರ್ಜುನ ಪಾಟೀಲ್, ಬೀರಪ್ಪ, ಲಕ್ಷ್ಮೀ ಕಾಮತ, ಆದೇಶ, ಅಂಕುಶ, ಸಂಗೀತಾ, ಪೂಜಾ, ಸುರೇಖಾ, ಭಾರತಿ, ಕಾವೇರಿ, ಮನಿಶಾ ರೆಡ್ಡಿ, ಭೂದೇವಿ ಇದ್ದರು. ಔರಾದ್, ಕಮಲನಗರ ತಾಲೂಕಿನ ವಿವಿಧ ಹಳ್ಳಿಗಳಿಂದ ೧೦೦ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.