?????????????? 
ಜಿಲ್ಲೆ

ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಪ್ರತಿಭಟನೆ

ಸೋಮವಾರಪೇಟೆ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.

ಗಾಂಧಿ ಪ್ರತಿಮೆಯಿಂದ ಮೆರವಣಿಗೆ ಹೊರಟ ನೂರಾರು ಪ್ರತಿಭಟನಾಕಾರರು ಕ್ಷೇತ್ರದ ಪರವಾಗಿ ಜಯಘೋಷ ಮೊಳಗಿಸಿದರು. ಮಹೇಶ್ ತಿಮರೋಡಿ, ಗಿರೀಶ್‌ಮಟ್ಟಣ್ಣನವರ್, ಯೂಟೂಬರ್ ಸಮೀರ್, ಜಯಂತ್‌ಶೆಟ್ಟಿ ಅವರು ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜೇಸಿ ವೇದಿಕೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮುಳ್ಳೂರು ಮಠದ ಮಠಾಧೀಶ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಅಸಂಖ್ಯಾತ ಹಿಂದುಗಳ ಬಗ್ಗೆ ಗೌರವವಿದ್ದರೆ, ಕನ್ನಡಿಗರ ಮತ್ತು ಜನರ ಭಾವನೆಗಳಿಗೆ ಬೆಲೆ ಕೊಡುವ ಮನಸ್ಥಿತಿ ಇದ್ದರೆ ಶ್ರೀ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆಯನ್ನು ನಿಲ್ಲಿಸಬೇಕು. ಕೂಡಲೇ ಕೇಂದ್ರಿಯ ತನಿಖಾ ದಳದಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.

ಒಬ್ಬ ಅನಾಮಿಕ ಬುರುಡೆ ಹಿಡಿದುಕೊಂಡು ಬಂದಾಗ ಅವನನ್ನು ಹಿಡಿದು ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಬೇಕಿತ್ತು. ಆದರೆ ಅವರು ಹೇಳಿದ ಜಾಗವನ್ನು ಅಗೆದಿರುವುದು ಖಂಡನೀಯ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದುಗಳು ತೊಂದರೆ ಅನುಭವಿಸಬೇಕಾಗಿದೆ. ಕಾಂಗ್ರೆಸ್ ಸತ್ಯದ ಪರವಾಗಿ ನಿಂತ ನಿದರ್ಶನಗಳಿಲ್ಲ. ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಧರ್ಮಸ್ಥಳದ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ. ಡಾ.ವೀರೇಂದ್ರ ಹೆಗ್ಗಡೆಯವರ ಪರವಾಗಿ ನಾವಿದ್ದೇವೆ ಎಂದು ಹೇಳಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತ್ರ ಒಂದು ಮಾತೂ ಹೇಳಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸಿ ಪ್ರಧಾನಿಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಈಗ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರ್‌ಎಸ್‌ಎಸ್ ಗೀತೆಯನ್ನು ಸದನದಲ್ಲಿ ಹಾಡಿದ್ದಾರೆ. ತಾಕತ್ತಿದ್ದರೆ, ಉಪಮುಖ್ಯಮಂತ್ರಿಗಳ ರಾಜೀನಾಮೆ ಪಡೆಯಲಿ ಎಂದು ಸವಾಲು ಹಾಕಿದರು.

ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಶ್ರೀ ಕ್ಷೇತ್ರದ ಮೇಲೆ ನಿರಂತರ ಅಪಪ್ರಚಾರ ನಡೆಸುತ್ತಿರುವ ಸಮಾಜ ದ್ರೋಹಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಧರ್ಮಸ್ಥಳದ ಬಗ್ಗೆ ಸಮೀರ್ ಎಂಬಾತ ಕಟ್ಟುಕಥೆಯನ್ನು ಮಾಡಿ ಜನರ ಹಾದಿ ತಪ್ಪಿಸಿದ್ದಾನೆ. ಈತನ ಹಿಂದೆ ವಿದೇಶಿ ಮೂಲದ ಕೈಗಳೂ ಅಡಗಿವೆ. ಕ್ಷೇತ್ರಕ್ಕೆ ಧಕ್ಕೆ ತರುವ ಕಾರ್ಯಕ್ಕೆ ಅಲ್ಲಿಂದಲೂ ಹಣ ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಜನಜಾಗೃತಿ ಸಮಿತಿ ಸ್ಥಾಪಕ ಅಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿ, ಕ್ಷೇತ್ರದಿಂದ ಈವರೆಗೆ 81,603 ಕೋಟಿ ಅನುದಾನವನ್ನು ಸಾಮಾಜಿಕ ಕಾರ್ಯಗಳಿಗೆ ನೀಡಲಾಗಿದೆ. ಇದನ್ನು ಸಹಿಸದ ಮಂದಿ ಕ್ಷೇತ್ರದ ವಿರುದ್ಧ ನಿರಂತರ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ್ ಕೃಷ್ಣಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಇದೇ ಪ್ರಕರಣದಲ್ಲಿ ಸಮೀರ್ ಹಾಗೂ ಸುಜಾತಾ ಭಟ್ ಅವರು ಸುಳ್ಳು ಮಾಹಿತಿ ನೀಡಿ ಕೊಡಗಿನ ಯುವತಿಯ ಹೆಸರನ್ನು ದುರ್ಬಳಕೆ ಮಾಡಿದ್ದು, ಇವರುಗಳ ವಿರುದ್ಧ ಮೊಕದ್ದಮೆ ದಾಖಲಿಸಬೇಕೆಂದು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.

ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಪುಂಡರೀಕ, ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ರಾಮಶೆಟ್ಟಿ, ವಿರಕ್ತ ಮಠಾಧೀಶ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್, ವಕೀಲ ಕಾಟ್ನಮನೆ ವಿಠಲ್ ಗೌಡ, ವೇದಿಕೆಯ ಅಧ್ಯಕ್ಷ ಎಸ್.ಆರ್. ಸೋಮೇಶ್, ಸಂಚಾಲಕ ಸುರೇಶ್ ಸೇರಿದಂತೆ ಇತರರಿದ್ದರು.