ಪಾಂಡವಪುರ: ಪವಿತ್ರ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡುವ ಮೂಲಕ ಹಿಂದುಗಳ ಭಾವನೆಗೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿ ಶ್ರೀಕ್ಷೇತ್ರ ಧರ್ಮಸ್ಥಳದ ಭಕ್ತರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಐದು ದೀಪ ಬಳಿ ಜಮಾವಣೆಗೊಂಡ ಶ್ರೀಕ್ಷೇತ್ರದ ಭಕ್ತರು, ಅಲ್ಲಿಂದ ಡಾ.ರಾಜ್‌ಕುಮಾರ್ ವೃತ್ತ, ಹಳೇ ಬಸ್ ನಿಲ್ದಾಣ, ಡಿಸಿಸಿ ಬ್ಯಾಂಕ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ತಾಲೂಕು ಕಚೇರಿ ಮುತ್ತಿಗೆ ಹಾಕಿ ಅಪಪ್ರಚಾರದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪವಿತ್ರ ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದ್ದು, ಇದರಿಂದ ಹಿಂದುಗಳ ಭಾವನೆಗೆ ಧಕ್ಕೆಯಾಗುತ್ತಿದೆ. ಒಬ್ಬ ಅನಾಮಿಕನ ಹೇಳಿಕೆ ಆಧರಿಸಿ ಕ್ಷೇತ್ರದ ಪಾವಿತ್ರೃತೆ ಹಾಳು ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಧರ್ಮಸ್ಥಳ ಕ್ಷೇತ್ರವನ್ನು ಕಲುಷಿತ ಮಾಡುವ ಹುನ್ನಾರ ನಡೆಸಿದ್ದಾರೆ. ಧರ್ಮಸ್ಥಳ ಕ್ಷೇತ್ರ ಮತ್ತು ಮಂಜುನಾಥನಾಥಸ್ವಾಮಿಗೆ ಕಿಂಚಿತ್ತೂ ಕಳಂಕ ಆಗದ ರೀತಿಯಲ್ಲಿ ಭಕ್ತರಾಗಿ ನಾವು ನಮ್ಮ ಜವಾಬ್ದಾರಿ ನಿಭಾಯಿಸಬೇಕಿದೆ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದಿಂದ ಮಹಿಳೆಯರು ಆರ್ಥಿಕವಾಗಿ ಬಲವರ್ಧನೆಗೊಂಡಿದ್ದಾರೆ. ಅಪಪ್ರಚಾರದ ಕಳಂಕವನ್ನು ತೊಡೆದುಹಾಕಲು ಕ್ಷೇತ್ರದ ಭಕ್ತರೆಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇದು ಯಾವುದೇ ಜಾತಿ, ಧರ್ಮ ಅಥವಾ ಪಕ್ಷದ ಹೋರಾಟ ಅಲ್ಲ. ನಾವೆಲ್ಲ ಮಂಜುನಾಥಸ್ವಾಮಿ ಭಕ್ತರಾಗಿ ಅಪಪ್ರಚಾರದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.
ಸೋಮವಾರ ಧರ್ಮಸ್ಥಳಕ್ಕೆ ರ‌್ಯಾಲಿ: ಸೋಮವಾರ ಬೆಳಗಿನ ಜಾವ ಮಂಡ್ಯ ಮತ್ತು ಮೈಸೂರು ಭಾಗದ ಸಾವಿರಾರು ಭಕ್ತರು ನೂರಾರು ಕಾರುಗಳಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ತೆರಳುವ ಸಂಕಲ್ಪ ಮಾಡಲಾಗಿದೆ. ಈ ರ‌್ಯಾಲಿಗೆ ಎಲ್ಲರೂ ಪಕ್ಷಾತೀತವಾಗಿ ಆಗಮಿಸಬೇಕು. ಬೆಳಗ್ಗೆ 4.30 ಗಂಟೆಗೆ ಕೆಆರ್‌ಎಸ್‌ನಿಂದ ಇಲವಾಲಕ್ಕೆ ಕಾರು ರ‌್ಯಾಲಿ ಹೊರಟು ಅಲ್ಲಿಂದ ಧರ್ಮಸ್ಥಳಕ್ಕೆ ಹೊರಡಲಾಗುವುದು. ಮಂಜುನಾಥನ ಆಶೀರ್ವಾದ ಪಡೆದು ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸಲಾಗುವುದು ಎಂದು ತಿಳಿಸಿದರು.
ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ ಮಾತನಾಡಿ, 800 ವರ್ಷಗಳ ಇತಿಹಾಸವಿರುವ ಒಂದು ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದರಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಗಿರೀಶ್ ಮಟ್ಟಣ್ಣನವರ್, ಅಂಚನ್, ಯೂಟ್ಯೂಬರ್ ಎಂ.ಡಿ.ಸಮೀರ್, ಮಹೇಶ್ ಶೆಟ್ಟಿ ತಿಮರೋಡಿ, ಸಂತೋಷ್ ಶೆಟ್ಟಿ ಸೇರಿದಂತೆ ಈ ಷಡ್ಯಂತ್ರದಲ್ಲಿ ಪಾಲುದಾರರಾಗಿರುವ ಪ್ರತಿಯೊಬ್ಬರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಒಬ್ಬ ಅನಾಮಿಕ ವ್ಯಕ್ತಿ ಶವಗಳನ್ನು ಹೂತು ಹಾಕಿದ್ದೇನೆ ಎಂದು ಸ್ಥಳ ಗುರುತಿಸಿದ್ದಾನೆ. ಅಲ್ಲಿ ಯಾವುದೇ ಸಾಕ್ಷಿ ಅಥವಾ ಅಸ್ಥಿಪಂಜರ ಸಿಕ್ಕಿಲ್ಲ. ಆದರೂ, ಎಸ್‌ಐಟಿ ತನಿಖಾ ತಂಡ ಒಬ್ಬ ಅನಾಮಿಕನ ಸುಳ್ಳು ಹೇಳಿಕೆ ಆಧರಿಸಿ ಜೆಸಿಬಿ, ಇಟಾಚಿ ಮೂಲಕ ನಿರಂತರವಾಗಿ ಗುಂಡಿ ಅಗೆದು ಪರಿಶೀಲನೆ ನಡೆಸಿದೆ. ಈ ಅಪಪ್ರಚಾರದಲ್ಲಿ ತೊಡಗಿರುವ ವ್ಯಕ್ತಿಗಳ ಬ್ಯಾಂಕ್ ಖಾತೆ, ಮೊಬೈಲ್ ಕರೆ ಹಾಗೂ ಸಂದೇಶಗಳನ್ನು ಪೊಲೀಸರು ತನಿಖೆಗೆ ಒಳಪಡಿಸಬೇಕು. ಶಬರಿಮಲೆ, ಧರ್ಮಸ್ಥಳ ಸೇರಿದಂತೆ ಹಿಂದುಗಳ ಪವಿತ್ರ ಧಾರ್ಮಿಕ ಕ್ಷೇತ್ರಗಳನ್ನು ಟಾರ್ಗೆಟ್ ಮಾಡುತ್ತಿರುವ ಹಿಂದಿನ ಉದ್ದೇಶ ಏನು ಎಂದು ಸರ್ಕಾರ ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಅವರ ಅನುಪಸ್ಥಿತಿಯಲ್ಲಿ ಕಂದಾಯ ಶಿರಸ್ತೇದಾರ್ ಮೋಹನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಆನಂದ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ ನವೀನ್, ಕ್ಷೇತ್ರಾಧ್ಯಕ್ಷ ನೀಲನಹಳ್ಳಿ ಧನಂಜಯ, ಕಾರ್ಯದರ್ಶಿ ಪುರುಷೋತ್ತಮ್, ರೈತ ಮೋರ್ಚಾ ಮಾಜಿ ಅಧ್ಯಕ್ಷ ಎಚ್.ಎನ್.ಮಂಜುನಾಥ್, ಎಸ್.ಎನ್.ಟಿ.ಸೋಮಶೇಖರ್, ಹಾರೋಹಳ್ಳಿ ಸೋಮಣ್ಣ, ರಾಜ್‌ಕುಮಾರ್, ಹಾರೋಹಳ್ಳಿ ಎಚ್.ಆರ್.ಧನ್ಯಕುಮಾರ್, ಶ್ರೀನಿವಾಸ ನಾಯಕ, ಎಸ್.ಎ.ಮಲ್ಲೇಶ್ ಇತರರಿದ್ದರು.