ಚನ್ನರಾಯಪಟ್ಟಣ: ಸನಾತನ ಹಿಂದು ಧರ್ಮವನ್ನು ಕಡೆಗಣಿಸಿದ್ದಲ್ಲಿ ಬದುಕಿನಲ್ಲಿ ಎಂದಿಗೂ ಮುಕ್ತಿ ಪಡೆಯಲು ಸಾಧ್ಯವಿಲ್ಲ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪುರಾಣ ಪ್ರಸಿದ್ದ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ನಡೆಯುತ್ತಿರುವ 91 ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ಗಂಗಾಪೂಜೆ ನೆರವೇರಿಸಿ ಮಾತನಾಡಿ, ಧರ್ಮದ ಹಾದಿಯಲ್ಲಿ ನಡೆದರೆ ಭಯದ ಬವಣೆ ಇರುವುದಿಲ್ಲ ಎಂದು ಆಶಿರ್ವಚನ ನೀಡಿದರು.
ನೀರು ಸದಾಕಾಲ ಹರಿಯುತಿದ್ದರೆ ಶುದ್ಧತೆ, ಗಾಳಿ ಬೀಸಿದರೆ ಸೊಗಸು ಹಾಗೂ ಬೆಳಕು ಬೆಳಗಿದರೆ ಎಲ್ಲವೂ ಸೌಖ್ಯ, ಹಾಗೆಯೇ ಧರ್ಮವು ಸದಾಕಾಲ ಆಚರಣೆಯಲ್ಲಿದ್ದರೆ ದೇಶವೇ ಪ್ರಜ್ವಲಿಸಲಿದೆ. ಸನಾತನ ಧರ್ಮದಲ್ಲಿ ಸಂಸ್ಕಾರ ಹಾಗೂ ಸಂಪ್ರದಾಯ ಎಂದಿಗೂ ನಿಂತ ನೀರಾಗಬಾರದು ಎಂದರು.
ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ, ಕಬ್ಬಳಿಯ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶಾಸಕ ಸಿ.ಎನ್.ಬಾಲಕೃಷ್ಣ, ಪರಿಸರ ಪ್ರೇಮಿ ಸಿ.ಎನ್.ಅಶೋಕ್, ಗ್ರಾಪಂ ಅಧ್ಯಕ್ಷ ಕೆ.ಪೃಥ್ವಿಕುಮಾರ್, ಮಾಜಿ ಅಧ್ಯಕ್ಷ ಶಿವನಂಜೇಗೌಡ ಹಾಗೂ ಇತರರು ಇದ್ದರು.
ಸೋಮವಾರ ಬೆಳಗ್ಗೆ 6 ಗಂಟೆಗೆ ಚುಂಚಶ್ರೀಗಳ ದಿವ್ಯಸಾನ್ನಿಧ್ಯದಲ್ಲಿ ಗೋಪೂಜೆ, ಪುಣ್ಯಾಹ, ಸಂಕಲ್ಪ, ಶ್ರೀ ಬಸವೇಶ್ವರಸ್ವಾಮಿಗೆ ರುದ್ರಾಭಿಷೇಕ, ಹೋಮ-ಹವನ ನಡೆಯಲಿದೆ. 9 ಗಂಟೆಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ, 9.30 ಕ್ಕೆ ಧಾರ್ಮಿಕ ಸಭೆ, 10 ಗಂಟೆಗೆ ಶ್ರೀ ಬಸವೇಶ್ವರಸ್ವಾಮಿ ಉತ್ಸವ, ಸಂಜೆ 5 ಗಂಟೆಗೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ತಳಿಕೆ, ಶ್ರೀ ಬಸವೇಶ್ವರಸ್ವಾಮಿಯ ಸರ್ಪೋತ್ಸವ, ಶ್ರೀ ಚೌಡೇಶ್ವರಿ ದೇವಿಯ ಉತ್ಸವ, 6 ಗಂಟೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ಜರುಗಲಿದೆ. ರಾತ್ರಿ 8.30 ರಲ್ಲಿ ದೇಗುಲದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀಗಳ ತೆಪ್ಪೋತ್ಸವ ನಡೆಯಲಿದೆ. ಧಾರ್ಮಿಕ ವೇದಿಕೆ ಕಾರ್ಯಕ್ರಮದ ಬಳಿಕ ಚುಂಚಶ್ರೀಗಳಿಗೆ ಪುಷ್ವವೃಷ್ಠಿ ನೆರವೇರಲಿದೆ.