ಬೇಲೂರು : ಉದಾತ್ತವಾದ ಜೀವನ ಮೌಲ್ಯಗಳನ್ನು ಸಂಪಾದಿಸಿ ಬಾಳುವುದೇ ನಿಜವಾದ ಧರ್ಮ. ಆದರ್ಶ ಜೀವನ ರೂಪಿತಗೊಳ್ಳಲು ಧರ್ಮ ಪ್ರಜ್ಞೆ ಅವಶ್ಯಕ. ಯಾವಾಗಲೂ ನಾಶವಾಗದೇ ಇರುವ ಶಕ್ತಿ ಧರ್ಮಕ್ಕಿದೆ. ಧರ್ಮವನ್ನು ನಾಶಗೊಳಿಸುವ ಶಕ್ತಿ ಯಾರಿಗೂ ಇಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಒಂಭತ್ತನೇ ದಿನದಂದು ಮಂಗಳವಾರ ರಾತ್ರಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಅವರು. ಹುಟ್ಟು ಸಾವು ಯಾರನ್ನೂ ಬಿಟ್ಟಿಲ್ಲ. ಸತ್ತು ಹೋದವರನ್ನು ಬದುಕಿಸಿದ ಅನೇಕ ಮಹಾತ್ಮರು ಸಹ ಕಾಲಗರ್ಭದಲ್ಲಿ ಕಣ್ಮರೆಯಾಗಿದ್ದನ್ನು ಕಾಣುತ್ತೇವೆ. ಹುಟ್ಟು ಸಾವುಗಳ ಮಧ್ಯದ ಬದುಕು ಸಮೃದ್ಧಗೊಳಿಸಿಕೊಳ್ಳಬೇಕಾದದ್ದು ಅವರವರ ಜವಾಬ್ದಾರಿಯಾಗಿದೆ. ಸಮಸ್ತ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಾರಿದ್ದಾರೆ. ಬಾಳಿನ ಭಾಗ್ಯೋದಯಕ್ಕೆ ಧರ್ಮದ ಆಚರಣೆ ಬೇಕು. ಜನ ಸಮುದಾಯದ ಉದ್ದಾರವೇ ಎಲ್ಲಾ ಧರ್ಮಗಳ ಮೂಲ ಗುರಿಯಾಗಬೇಕಿದೆ. ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವುದೇ ಧರ್ಮದ ಗುರಿಯಾಗಬೇಕು. ತಾನು ಎಲ್ಲರಿಗಾಗಿ ಅನ್ನುವುದೇ ಧರ್ಮ. ಎಲ್ಲರೂ ತನಗಾಗಿ ಅನ್ನುವುದು ಅಧರ್ಮವೆನಿಸುತ್ತದೆ. ದಿಕ್ಸೂಚಿ ಇಲ್ಲದೇ ಹೋದರೆ ಬದುಕಿಗೆ ಅರ್ಥವೇ ಇಲ್ಲ. ಧರ್ಮ ದರ್ಶನಗಳ ಅರಿವು ಸಂಸ್ಕೃತಿಯ ಪುನರುತ್ಥಾನಕ್ಕೆ ಕಾರಣವಾಗುತ್ತದೆ. ಪವಿತ್ರವಾದ ಧರ್ಮದ ದೋಣಿಗೆ ರಂಧ್ರ ಕೊರೆಯುವ ಕೆಲಸ ಯಾರೂ ಮಾಡಬಾರದು. ಸ್ವಧರ್ಮದಲ್ಲಿ ನಿಷ್ಠೆ ಪರಧರ್ಮದಲ್ಲಿ ಸಹಿಷ್ಣುತಾ ಮನೋಭಾವನೆಯಿಂದ ಬಾಳಿದಾಗ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವಾಗುವುದೆಂದ ಅವರು ಶರನ್ನವರಾತ್ರಿಯ ಎಲ್ಲಾ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಜರುಗಿದ್ದು ತಮಗೆ ತೃಪ್ತಿ ತಂದಿದೆ ಎಂದರು.
ಜಗದ್ಗುರುಗಳ ಆಶಿರ್ವಾದ ಪಡೆದು ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ರಂಭಾಪುರಿ ಬೆಳಗು ಮಾಸ ಪತ್ರಿಕೆ ಬಿಡುಗಡೆ ಮಾಡಿ ಭಾರತೀಯ ಇತಿಹಾಸ ಮತ್ತು ಭವ್ಯ ಪರಂಪರೆ ಶ್ರೇಷ್ಠತೆಯಿಂದ ಕೂಡಿದೆ. ಶಾಸ್ತ್ರ ಅಧ್ಯಯನದಿಂದ ಸತ್ಯ ಸಂಗತಿ ಅರಿಯಲು ಸಹಕಾರಿಯಾಗುತ್ತದೆ. ಆಡುವ ಮಾತುಗಳಿಗಿಂತ ಗಳಿಸಿದ ಪೂರ್ವದ ದಾಖಲೆಗಳು ಭವಿಷ್ಯತ್ತಿನ ಬಾಳಿಗೆ ದಿಕ್ಸೂಚಿಯಾಗಿವೆ. ಶ್ರೀ ರಂಭಾಪುರಿ ಪೀಠ ಆಧ್ಯಾತ್ಮದ ನೆಲೆ ಬೀಡು. ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ಎಲ್ಲ ಧರ್ಮಗಳ ಗುರಿಯಾಗಿದೆ. ಧರ್ಮ ಜಾತಿಯ ಸಂಘರ್ಷದಲ್ಲಿ ಸಂಸ್ಕೃತಿ ಸೌಜನ್ಯ ನಾಶಗೊಳ್ಳಬಾರದೆಂದ ಅವರು ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನ ನಮ್ಮೆಲ್ಲರ ಉಜ್ವಲ ಬಾಳಿಗೆ ಆಶಾಕಿರಣವಾಗಿದೆ. ಅಲ್ಲದೆ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ಶಾಂತಿ ಎಂಬ ಜಗದ್ಗುರುಗಳ ಸಂದೇಶ ಎಷ್ಟೊಂದು ಅರ್ಥಗರ್ಭಿತವಾಗಿದ್ದು, ಇದನ್ನು ನಂಬಿ ಬದುಕಿದರೆ ಜೀವನ ಸಾರ್ಥಕವಾಗಲಿದೆ. ಈ ನಿಟ್ಟಿನಲ್ಲಿ ಗುರುಗಳ ಆಶಿರ್ವಾದ ಪಡೆದು ಪ್ರತಿಯೊಬ್ಬರು ತಮ್ಮ ಜೀವನವನ್ನು ಪಾವನ ಮಾಡಿಕೊಳ್ಳಬೇಕು ಎಂದರು. ರಂಭಾಪುರಿ ಬೆಳಗು ಮಾಸ ಪತ್ರಿಕೆ ಜನಮನದ ಪರಿಶುದ್ಧತೆಗೆ ಸದಾ ಶ್ರಮಿಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ತೋ.ಚ.ಅನಂತ ಸುಬ್ಬರಾಯ ಮಾತನಾಡಿ, ಬೇಲೂರಿನ ಇತಿಹಾಸದಲ್ಲಿ ಇಂತಹ ಅದ್ಬುತ ಕಾರ್ಯಕ್ರಮ ನಾವು ನೋಡೇ ಇರಲಿಲ್ಲ. ನಿಜವಾಗಿಯೂ ಜಗದ್ಗುರುಗಳ ಪಾದಸ್ಪರ್ಷದಿಂದ ಬೇಲೂರಿನ ನೆಲ ಪಾವನವಾಗಿದೆ. ಜತೆಗೆ ಕಾರ್ಯಕ್ರಮದ ಅಷ್ಟೂ ದಿನ ಜ್ಞಾನ ದಾಸೋಹದೊಂದಿಗೆ ಅನ್ನ ದಾಸೋಹವನ್ನು ಶಾಸಕ ಕೆ.ಎಸ್.ಲಿಂಗೇಶ್ ನೇತೃಥ್ವದ ತಂಡ ಅಚ್ಚುಕಟ್ಟಾಗಿ ನಿಭಾಯಿಸಿರುವುದು ಈ ಸಮ್ಮೇಳನಕ್ಕೆ ಮೆರಗು ತಂದು ಕೊಟ್ಟಿದೆ. ಪ್ರತಿನಿತ್ಯ ಶ್ರೀಗಳ ಆಶಿರ್ವಚನದಿಂದ ಬೇಲೂರಿನ ಜನತೆಗೆ ಧರ್ಮದ ಬಗ್ಗೆ ಅರಿವು ಮೂಡಿಸಿದೆ ಎಂದರು.
ಶ್ರೀ ರಂಭಾಪುರಿ ಪೀಠದ ದಾಖಲೆ ಸಂಪುಟ ಬಿಡುಗಡೆ ಮಾಡಿ ಮಾತನಾಡಿದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಸಮಿತಿ ಅಧ್ಯಕ್ಷ-ಶಾಸಕ ಕೆ.ಎಸ್.ಲಿಂಗೇಶ್, ಶ್ರೀ ಜಗದ್ಗುರು ರಂಭಾಪುರಿ ಪೀಠ ಜಾತಿ ಮತ ಪಂಥ ಮೀರಿ ಸರ್ವರನ್ನು ಅಪ್ಪಿಕೊಂಡು ಮುನ್ನಡೆದಿದೆ. ಇಂತಹ ಅದ್ಬುತ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸಾಕ್ಷಿಕರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಕಷ್ಟು ಜನರು ಪತ್ರ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ. ಅಲ್ಲದೆ ಜಗದ್ಗುರುಗಳು ತಮ್ಮ ಇಷ್ಟಲಿಂಗ ಪೂಜೆ, ಸಮ್ಮೇಳನದಲ್ಲಿನ ಆಶಿರ್ವಚನ ನಮ್ಮನ್ನೆಲ್ಲ ಹಾಗೂ ನೆರೆದಿದ್ದವರನ್ನೆಲ್ಲ ಮಂತ್ರ ಮುಗ್ದರನ್ನಾಗಿರುವುದು ಸುಳ್ಳಲ್ಲ. ಗರುಗಳ ಆಶಿರ್ವಾದದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣವಾಗಿದೆ ಎಂದರು.
ನೇತೃತ್ವ ವಹಿಸಿದ ಬಾಳೆಹೊನ್ನೂರು ಖಾಸಾ ಶಾಖಾಮಠ ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಇಂದು ಶ್ರೀ ಜಗದ್ಗುರುಗಳ ದಸರಾ ದರ್ಬಾರಿನ ಕೊನೆಯ ದಿನ. ತಾವು ಜಗದ್ಗುರುಗಳನ್ನು ಈ ವೇಷ ಭೂಷಣದಲ್ಲಿ ಕಾಣಬೇಕೆಂದರೆ ಮುಂದಿನ ದಸರಾ ಸಮಾರಂಭದಲ್ಲಿ ಮಾತ್ರ ಸಾಧ್ಯ. ಬೇಲೂರು ತಾಲೂಕಿನ ಜನತೆ ತಮ್ಮ ಭಕ್ತಿ ಭಾವ ಮೆರೆದಿದ್ದೀರಿ. ದಸರಾ ಸಮಿತಿಯವರು ತಮ್ಮನ್ನು ತಾವು ಅರ್ಪಿಸಿಕೊಂಡು ಸೇವೆ ಸಲ್ಲಿಸುತ್ತಿರುವುದು ಅಭಿಮಾನದ ಸಂಗತಿ ಎಂದರು.
ನಾಂದಿ ನುಡಿ ಸೇವೆ ಸಲ್ಲಿಸಿದ ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ದಸರಾ ಸಮಾರಂಭ ಮಾತ್ರವಲ್ಲದೇ ಬೆಳಗಿನ ಪೂಜೆಯಲ್ಲಿಯೂ ನಿರೀಕ್ಷೆ ಮೀರಿ ಜನತೆ ಪಾಲ್ಗೊಂಡಿರುವುದು ನಿಮ್ಮೆಲ್ಲರ ಭಕ್ತಿ ಗೌರವಕ್ಕೆ ಸಾಕ್ಷಿಯಾಗಿದೆ. ಗುರುವಿನ ಅಂತ:ಕರಣದ ಆಶೀರ್ವಾದ ಎಲ್ಲರ ಮೇಲಿರಲಿ ಎಂದರು. ಎಡೆಯೂರು ರೇಣುಕ ಶಿವಾಚಾರ್ಯರು ಸೇರಿದಂತೆ ಮಳಲಿ, ದೊಡ್ಡಗುಣಿ, ತೆಂಡೇಕೆರೆ, ಸವಡಿ, ಪಾಳ್ಯಾ, ರೌಡಕುಂದಿ, ಎಸಳೂರು, ಕಲ್ಲಳ್ಳಿ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮಿಗಳು, ಕೊಡ್ಲಿಪೇಟೆ ಕಲ್ಲಳ್ಳಿಮಠದ ರುದ್ರಮುನಿ ಸ್ವಾಮಿಗಳು, ಹಾಸನ ಜಿಲ್ಲಾ ಮುಜರಾಯಿ ಅಧ್ಯಕ್ಷ ಪ್ರವೀಣ್ ಗುರೂಜಿ ಅವಧೂತರು, ತಿಪಟೂರಿನ ಟಿ.ಎನ್.ಪರಮಶಿವಯ್ಯನವರು, ಕೆ.ಎಂ.ಷಡಕ್ಷರಿ ಇವರಿಗೆ ಗುರು ರಕ್ಷೆ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.
ದಸರಾ ಸಮಿತಿ ಕೋಶಾಧ್ಯಕ್ಷ ನಟರಾಜು ಐಸಾಮಿಗೌಡ, ಬೆಂಗಳೂರಿನ ಶ್ರೀ ಬಿಳಿಗಿರಿ ರಂಗನಾಥ ಮಹಿಳಾ ಮತ್ತು ಮಕ್ಕಳ ಸಮೃದ್ಧಿ ಸಂಘದವರು ನವದುರ್ಗಿ ಲೀಲಾ ದರ್ಶನ ಪ್ರಸ್ತುತಪಡಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಶಿವಮೊಗ್ಗದ ಶಾಂತಾ ಆನಂದ ಮತ್ತು ಹೆಬ್ಬಾಳು ಭುವನೇಶ್.ಹೆಚ್.ಜಿ. ಇವರಿಂದ ನಿರೂಪಣೆ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಇವರ ಸಂಗೀತಕ್ಕೆ ಗದಗಿನ ಎಸ್.ಎಸ್.ಹಿರೇಮಠ ತಬಲಾ ಸಾಥ ನೀಡಿದರು.
ನಜರ್ ಸಮರ್ಪಣೆ:
ಸಮಾರಂಭದ ಕೊನೆಗೆ ಶಿವಾಚಾರ್ಯರು, ಸರ್ಕ್ಯೂಟ್ ಏಜಂಟ, ಶ್ರೀ ಪೀಠದ ಸಿಬ್ಬಂದಿ ವರ್ಗ, ದಸರಾ ಸಮಿತಿ ಪದಾಧಿಕಾರಿಗಳು, ಭಕ್ತ ಜನತೆ ವಿವಿಧ ವೇಷ ಭೂಷಣಗಳಲ್ಲಿ ಭಕ್ತ ಸಮೂಹ ನಡೆಸಿದ ನಜರ್(ಗೌರವ) ಸಮರ್ಪಣೆ ಆಕರ್ಷಣೀಯವಾಗಿತ್ತು. ಹಗಲು ದೀವಟಿಗೆಯ ಮೇಘರಾಜ ಚಕ್ರಸಾಲಿ ಇವರ ನಜರ್‌ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ದೊಡ್ಡಗುಣಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನಜರ್ ಸಮರ್ಪಿಸಿದರು.
ಹರಿಹರದ ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಭಾಗವಹಿಸಿದ್ದರು. ಕಾರ್ಯಾಧ್ಯಕ್ಷ ಕೊರಟೀಕೆರೆ ಪ್ರಕಾಶ ಸೇರಿದಂತೆ ಎಲ್ಲ ಪದಾಧಿಕಾರಿಗಳಾದ ಪರಮೇಶ್, ರಾಜಶೇಖರ ಹೆಚ್., ಕೆ.ಸಿ.ಮಹಾದೇವ, ಬಿ.ಎಸ್.ಅಶೋಕ್, ದೇವರಾಜ್(ದಿವಾನ್), ದೇವರಾಜ್, ದೊಡ್ಡ ವೀರೇಗೌಡ್ರು, ಲತಾ ದಿಲೀಪ್ ಕುಮಾರ, ಪ್ರಶಾಂತ ಕಲ್ಲೂರ, ನಂಜುಂಡೇಶ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.