ಹೊಳೆನರಸೀಪುರ: ವಿಶ್ವಗುರು ಬಸವಣ್ಣನವರು ದಯೆಯೇ ಧರ್ಮದ ಮೂಲವಯ್ಯ ಎಂದರು. ಆದರೆ, ಇಂದು ಧರ್ಮದ ಹೆಸರಲ್ಲಿ ಅಂತರ ಸೃಷ್ಟಿಸುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರೆ. ಇದು ಆತಂಕದ ವಿಷಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗದ ಸಮುದಾಯ ಭವನದಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಶುಕ್ರವಾರ ಆಯೋಜಿಸಿದ್ದ ಬಸವ ಜಯಂತಿ ಮತ್ತು ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಧರ್ಮದ ಹೆಸರಲ್ಲಿ ಆತಂಕ ಸೃಷ್ಟಿಸುವವರ ಬಗ್ಗೆ ಸಮಾಜದ ಬಂಧುಗಳು ಎಚ್ಚರದಿಂದ ಇರಬೇಕು. ಜಗಜ್ಯೋತಿ ಬಸವೇಶ್ವರರು, ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದರು. ಇಂತಹ ಮಹಾ ಮಹಿಮರ ಜಯಂತಿ ಆಚರಣೆಯಿಂದ ಇಂದಿನ ಪೀಳಿಗೆಗೆ ಸ್ಫೂರ್ತಿ, ಚೈತನ್ಯ ಮೂಡುತ್ತದೆ. ಸಾಮಾಜಿಕ ಸಾಮರಸ್ಯ ಇಂದಿನ ಅಗತ್ಯವಾಗಿದೆ ಎಂದು ನುಡಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಕ್ರಾಂತಿಯನ್ನೇ ಮಾಡಿದರೆ, 20ನೇ ಶತಮಾನದಲ್ಲಿ ಸಮಾನತೆಯ ಸಂದೇಶ ಸಾರಿ ತ್ರಿವಿಧ ದಾಸೋಹದಿಂದ ಎಲ್ಲ ಸಮುದಾಯದವರಿಗೆ ಅನ್ನ, ಆಶ್ರಯ ಮತ್ತು ಅಕ್ಷರ ಕೊಟ್ಟವರು ಡಾ.ಶ್ರೀ ಶಿವಕುಮಾರ ಸ್ವಾಮೀಜಿ. ವಿಶ್ವಗುರು ಬಸವಣ್ಣನವರು, ಕಾಯಕ, ಸಹಯೋಗ, ಸೋದರತ್ವದ ಬುನಾದಿಯ ಮೇಲೆ ಸುಂದರ ಸಮಾಜದ ನಿರ್ಮಾಣದ ಕನಸು ಕಂಡಿದ್ದರು. ಸರ್ವರಿಗೂ ಸಮಾನ ಅವಕಾಶ ಸಿಗಬೇಕು ಎಂದು ಬಯಸಿದ್ದರು. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುವುದು ಲಿಂಗಾಯತ ಸಮಾಜ. ನಮ್ಮ ವಚನದಲ್ಲಿ ಅನುಭಾವವಿದೆ. ಇಂದಿನ ಮಕ್ಕಳಿಗೆ ನಮ್ಮ ತಾಯಂದಿರು ವಚನಗಳನ್ನು ಕಲಿಸಬೇಕು. ಇದು ಅವರಲ್ಲಿ ನೈತಿಕತೆ ಹೆಚ್ಚಿಸುತ್ತದೆ. ಭಾಷೆಯ ಪ್ರೌಢಿಮೆ ಬೆಳೆಸುತ್ತದೆ ಎಂದು ಹೇಳಿದರು.
ಪ್ರಗತಿಯಲ್ಲಿ ಅನುಭವ ಮಂಟಪ:
ಜಗತ್ತಿಗೆ ಸಂಸತ್ತಿನ ಪರಿಕಲ್ಪನೆಯನ್ನು ಕಟ್ಟಿಕೊಟ್ಟಿದ್ದೆ ಬಸವಾದಿ ಶರಣರ 770 ಅಮರಗಣಂಗಳ ಅನುಭವ ಮಂಟಪ. ಇಲ್ಲಿ ಮಹಿಳೆಯರಿಗೂ ಸ್ಥಾನ ಕಲ್ಪಿಸಲಾಗಿತ್ತು. 12ನೇ ಶತಮಾನದಲ್ಲೇ ನಮ್ಮ ಶರಣರು ಸಮಾನತೆಯನ್ನು ಕಾರ್ಯಗತ ಮಾಡಿದ್ದರು. ಈಗ ಬಸವ ಕಲ್ಯಾಣದಲ್ಲಿ 700 ಕೋಟಿ ರೂ.ವೆಚ್ಚದಲ್ಲಿ ಭವ್ಯ ಅನುಭವ ಮಂಟಪ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದರು.
ಬಾಲ್ಕಿ ಹಿರೇಮಠದ ಶ್ರೀ ಚನ್ನಬಸವ ಪಟ್ಟದೇವರು ಆಧುನಿಕ ಅನುಭವ ಮಂಟಪದ ನಿರ್ಮಾಣಕ್ಕೆ ನಾಂದಿ ಹಾಡಿದ್ದರು. ಈ ಹಿಂದೆ 2013ರಿಂದ 2018ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕೆ ಸಮ್ಮತಿಸಿ ಅನುದಾನ ಬಿಡುಗಡೆ ಮಾಡಿದ್ದರು. ಇತ್ತೀಚೆಗೆ ಬೀದರ್‌ಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ 400 ಕೋಟಿ ರೂ.ಅನುದಾನ ನೀಡಿ ಮುಂದಿನ ವರ್ಷದೊಳಗೆ ಅನುಭವ ಮಂಟಪ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದರು.
ಸಂಸದ ಶ್ರೇಯಸ್ ಎಂ.ಪಟೇಲ್ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಹಿರಿಯರು ಹಾಗೂ ತಾಯಂದಿರು ಉತ್ತಮ ಮಾರ್ಗದರ್ಶನ ನೀಡಬೇಕು. ಯುವಕರು ವ್ಯಸನಗಳ ದಾಸರಾಗುತ್ತಿದ್ದು ದೈಹಿಕ, ಮಾನಸಿಕವಾಗಿ ದುರ್ಬಲವಾಗುತ್ತಿದ್ದಾರೆ. ಈ ರೀತಿಯ ಬೆಳವಣಿಗೆಯಿಂದ ಸಮಾಜಕ್ಕೆ ಮಾರಕವಾಗುತ್ತದೆ. ಶರಣರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಪ್ರಜೆಗಳಾಗಬಹುದು ಎಂದರು.
ತೇಜೂರು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ರಾಜಾಪುರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಮಲ್ಲದೇವರಪುರ ವಿರಕ್ತ ಮಠದ ಶ್ರೀ ಮಹಾಂತ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ತೆರೆದ ವಾಹನದಲ್ಲಿ ಬಸವಣ್ಣನವರು ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರವನ್ನು ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಪುರಸಭೆ ಅಧ್ಯಕ್ಷ ಎಚ್.ಕೆ.ಪ್ರಸನ್ನ, ಗ್ರಾನೈಟ್ ರಾಜಶೇಖರ್, ತಾಲೂಕು ಶಿವಕುಮಾರ ಸ್ವಾಮೀಜಿ ಸಂಘದ ಅಧ್ಯಕ್ಷ ಸುರೇಶ್, ತಹಸೀಲ್ದಾರ್ ಎಂ.ವೈ.ರೇಣು ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ, ಕುಮಾರಸ್ವಾಮಿ, ಪ್ರಭುಶಂಕರ, ವಿಶ್ವನಾಥ, ಸೋಮಣ್ಣಯ್ಯ ಮತ್ತಿತರರು ಪಾಲ್ಗೊಂಡಿದ್ದರು.