ಮೈಸೂರು: ರಾಜ್ಯದಲ್ಲಿ ಆರಂಭಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಲಿಂಗಾಯತ ಸಮುದಾಯದವರು ಧರ್ಮದ ಜಾಗದಲ್ಲಿ ಲಿಂಗಾಯತ ಎಂದು ಮೊದಲು ಬರೆಯಿಸಿ ಬಳಿಕ ಜಾತಿ ಇದ್ದಲ್ಲಿ ತಮ್ಮ ಜಾತಿ ಬರೆಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣ ಮಹಾದೇವಪ್ಪ ಮನವಿ ಮಾಡಿದರು.
ಸಣ್ಣ, ಸಣ್ಣ ಸಮುದಾಯಗಳು ಲಿಂಗಾಯತ ಧರ್ಮದಿಂದ ದೂರ ಸರಿಯುತ್ತಿರುವ ಈ ದಿನಗಳಲ್ಲಿ ಅಖಂಡ ಲಿಂಗಾಯತ ಸಮಾಜವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗಿದೆ. ಹೀಗಾಗಿ ಸಮೀಕ್ಷೆ ವೇಳೆ ಗೊಂದಲಕ್ಕೆ ಒಳಗಾಗಬಾರದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಈವರೆಗೆ ನಡೆದಿರುವ ಸಮೀಕ್ಷೆ ವೇಳೆ ಹಲವರು ತಮ್ಮ ಧರ್ಮ ಕಾಲಂನಲ್ಲಿ ಹಿಂದು ಎಂದು ಬರೆಸಿದ್ದಾರೆ. ಆದರೆ ಈಗ ಈ ರೀತಿ ಮಾಡದೇ ಲಿಂಗಾಯತ ಧರ್ಮ ಎಂದೇ ಬರೆಸಬೇಕು. ಒಂದು ವೇಳೆ ಜಾತಿ ಇದ್ದಲ್ಲಿ ಲಿಂಗಾಯತ ಎಂದು ಬರೆದು ಮುಂದೆ ಜಾತಿಯನ್ನು ನಮೂದಿಸಬೇಕು. ಇದರಿಂದ ನಮ್ಮ ಸಮುದಾಯದ ಬಲ ಹೆಚ್ಚುತ್ತದೆ ಎಂದು ಕೋರಿದರು.
ಮಹಾಸಭಾದ ಎಲ್.ಶಿವಲಿಂಗಯ್ಯ, ಗಂಗಾಧರಸ್ವಾಮಿ, ಚಂದ್ರಶೇಖರ್, ಬಿ.ಎಂ.ಮರಪ್ಪ ಇದ್ದರು.