ಜಿಲ್ಲೆ

ಧರ್ಮಜ್ಯೋತಿಯಿಂದ ಅಜ್ಞಾನ ದೂರ

ತುಮಕೂರಿನಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಅಭಿಪ್ರಾಯ

ತುಮಕೂರು-: ಇಂದಿನ ಆಧುನಿಕ ಕಾಲದಲ್ಲಿ ಮನುಷ್ಯ ಯಂತ್ರದಂತೆ ಕೆಲಸ ಮಾಡಿದರೂ ಬದುಕಿನಲ್ಲಿ ಶಾಂತಿ ನೆಮ್ಮದಿಯಿಲ್ಲ. ಆದ್ದರಿಂದ ಬಾಳಿನ ಭಾಗ್ಯೋದಯಕ್ಕೆ ಆಧ್ಯಾತ್ಮಿಕ ಚಿಂತನೆಗಳು ಅವಶ್ಯಕ. ಧರ್ಮ ದೀಪದ ಬೆಳಕಿನಿಂದ ಮನುಷ್ಯನ ಅಜ್ಞಾನ ದೂರವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್​ ಆಶ್ರಯದಲ್ಲಿ ನಗರದ ಶ್ರೀ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಆಯೋಜಿಸಿರುವ ರಂಭಾಪುರಿ ಜಗದ್ಗುರುಗಳ ಧನುಮಾರ್ಸದ ಇಷ್ಟಲಿಂಗ ಮಹಾಪೂಜಾ ಅಂಗವಾಗಿ ಶುಕ್ರವಾರ ಜರುಗಿದ ಜನ ಜಾಗೃತಿ 2ನೇ ದಿನದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮನುಷ್ಯ ಜೀವನದಲ್ಲಿ ಧರ್ಮ ಅರ್ಥ ಕಾಮ ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಜೀವನ ನಿರರ್ಥಕ. ಭೌತಿಕ ಸಂಪನ್ಮೂಲಗಳಾಗಲಿ, ಸಿರಿ ಸಂಪತ್ತಿನ ಸಂಗ್ರಹಗಳಾಗಲಿ ಮನುಷ್ಯನಿಗೆ ಸಂತೃಪ್ತಿ ತಂದು ಕೊಡಲಾರವು. ಅದರೊಂದಿಗೆ ಒಂದಿಷ್ಟಾದರೂ ಆಧ್ಯಾತ್ಮಿಕ ತಿಳಿವಳಿಕೆ ಮುಖ್ಯ. ಯಾವ ಸಂಪತ್ತಿಗಾಗಿ ಈ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ ಎಂದರು.

ಮಲಿನಗೊಂಡ ಮನಸ್ಸಿಗೆ ಶಿವಜ್ಞಾನದ ಅರಿವು ಮೂಡಿಸಿ ಜಾಗೃತಗೊಳಿಸುವ ಶಕ್ತಿ ಶ್ರೀ ಗುರುವಿಗೆ ಇದೆ. ಹೃದಯ ಹೃದ್ಭೂಮಿಯನ್ನು ಕೃಷಿಗೈದು ಸಂಸ್ಕಾರ ಸಚ್ಚಾರಿತ್ರದಿಂದ ಬದುಕನ್ನು ಶ್ರೀಮಂತಗೊಳಿಸುವ ಅದ್ಭುತ ಶಕ್ತಿ ಗುರುವಿನಲ್ಲಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಗುರು ಹಿರಿಮೆಯನ್ನು ಕೊಂಡಾಡಿದ್ದಾರೆ ಎಂದರು.

ಸಾಹಿತ್ಯ ಸಂಶೋಧಕ ಡಾ.ಎ.ಎಸ್​.ವಾಲಿ ಮಾತನಾಡಿ, ಶಿವಜ್ಞಾನದ ಅಕ್ಷಯ ಸಿದ್ಧಿಯಾದ ಶ್ರೀಗುರುವನ್ನು ಎಷ್ಟು ಕೊಂಡಾಡಿದರೂ ಕಡಿಮೆ ಆಗಿದೆ. ಪರಶಿವನ ಸಾಕಾರ ರೂಪ ಗುರುವೆಂದು ವೀರಶೈವ ಧರ್ಮ ಹೇಳುತ್ತದೆ. ಶಿವ ಪಥವನರಿಯಲು ಗುರು ಪಥವೇ ಮೊದಲು ಎಂದು ಭಕ್ತಿ ಭಂಡಾರಿ ಬಸವಣ್ಣನವ್ರು ಹೇಳಿದ್ದುಂಟು. ನಂಬಿದವರ ಬಾಳಿನಲ್ಲಿ ಶ್ರೀ ಗುರು ಅದ್ಭುತ ಶಕ್ತಿ ತುಂಬಿ ಉಜ್ವಲ ಬಾಳಿಗೆ ಬಲವನ್ನು ದೊರಕಿಸಿಕೊಡುವಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರಾಗಲಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರಾಗಲಿ ಧಾರ್ಮಿಕ ಕ್ರಾಂತಿಯ ಜತೆಗೆ ಸಾಮಾಜಿಕ ಸತ್ಕ್ರಾಂತಿಗೈದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಸಿದ್ಧರಬೆಟ್ಟ ಕ್ಷೇತ್ರದ ಶ್ರೀವಿರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಇಂಥ ಧಾರ್ಮಿಕ ಸಮಾರಂಭಗಳು ಅವಶ್ಯಕ. ಶ್ರೀರಂಭಾಪುರಿ ಜಗದ್ಗುರುಗಳ ಧರ್ಮ ಜಾಗೃತಿ ಅಭಿಯಾನ ನಿರಂತರವಾಗಿ ಜರುಗುತ್ತಿರುವುದು ಭಕ್ತರ ಸೌಭಾಗ್ಯ ಎಂದರು.

ಬಿಳಿಕಿ ಶ್ರೀರಾಚೋಟೇಶ್ವರ ಸ್ವಾಮೀಜಿ, ಬೀರೂರು ಶ್ರೀರುದ್ರಮುನಿ ಸ್ವಾಮೀಜಿ, ಮಾದಿಹಳ್ಳಿ ಶ್ರೀಚನ್ನಮಲ್ಲಿಕಾರ್ಜುನ ಸ್ವಾಮೀಜಿ ಉಪಸ್ಥಿತರಿದ್ದರು. ಶಾಸಕ ಜಿ.ಬಿ.ಜೋತಿಗಣೇಶ್​, ಬಿಜೆಪಿ ಕಾರ್ಯದರ್ಶಿ ಅಂಬಿಕಾ, ಯುವ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆಮಠ, ಸಮಾಜದ ಮುಖಂಡರಾದ ಟಿ.ಸಿ.ಓಹಿಲೇಶ್ವರ, ಎನ್​.ಆರ್​.ವಿಶ್ವಾರಾಧ್ಯರು, ಸಿ.ಎಸ್​.ಬಸವರಾಜಯ್ಯ, ಎಚ್​.ಎನ್​.ಚಂದ್ರಶೇಖರ, ಡಿ.ಜಗದೀಶ, ಕೆ.ಎಸ್​.ದರ್ಶನ್​ ಮತ್ತಿತರರು ಇದ್ದರು. ಟ್ರಸ್ಟ್​ನ್ನ ಕಾರ್ಯದರ್ಶಿ ಎಚ್​.ಎಸ್​. ಭಸ್ಮಾಗಿ ರುದ್ರಯ್ಯ, ಎಸ್​.ಓಂಕಾರಸ್ವಾಮಿ ಕಾರ್ಯಕ್ರಮ ನಡೆಸಿಕೊಟ್ಟರು.