ಮುಂಡರಗಿ: ಸಮಾಜದಲ್ಲಿ ಮನುಷ್ಯತ್ವದಿಂದ ಮಾತ್ರ ಸಮಾನತೆ ಕಾಣಲು ಸಾಧ್ಯ. ಹೆಣ್ಣು-ಗಂಡು ಎನ್ನದೇ ಸಮಾನತೆಯಿಂದ ನಡೆಯಬೇಕು. ಹೆಣ್ಣು ಮಕ್ಕಳು ಧರ್ಮ ಮತ್ತು ಸಂಸ್ಕೃತಿ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಗುರುವಾರ ರಾತ್ರಿ ಜರುಗಿದ 44ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹೆಣ್ಣಿಗೆ ದೇಶದಲ್ಲಿ ದೊಡ್ಡ ಗೌರವವಿದೆ. ಹೆಣ್ಣು ಪರಪುರುಷರಿಗೆ ತಾಯಿಯಾಗಿ ಕಾಣಬೇಕು ಹೊರತು ವಿಕಾರದ ವಸ್ತುವಾಗಿ ಕಾಣಬಾರದು. ಮಹಿಳೆಯರಲ್ಲಿ ಸಂಸ್ಕಾರ, ಸುಸಂಸ್ಕೃತಿಯ ಗುಣಧರ್ಮ ಬರಬೇಕು. ಮನುಷ್ಯನು ಮನಸ್ಸಿಗೆ ಸಂಸ್ಕಾರ ನೀಡಿದರೆ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
ಪ್ರಾಧ್ಯಾಪಕಿ ಶಶಿಕಲಾ ಕುಕನೂರ ಮಾತನಾಡಿ, ಸುಸ್ಥಿರ ಸಮಾಜ ನಿರ್ವಣಕ್ಕೆ ವಚನ ಸಾಹಿತ್ಯ ಸಹಕಾರಿ. ಸ್ತ್ರೀಯರನ್ನು ಗೌರವಿಸುವಂತ ಗುಣ ಅಳವಡಿಸಿಕೊಳ್ಳಬೇಕು. ನಿತ್ಯ ಜೀವನದಲ್ಲಿ ವಚನಗಳನ್ನು ಅಳವಡಿಸಿಕೊಂಡರೆ ಬಸವಣ್ಣನವರು ಕಂಡ ಕನಸು ನನಸಾಗಲು ಸಾಧ್ಯವಾಗುತ್ತದೆ ಎಂದರು.
ರಾಜ್ಯ ವಿಜ್ಞಾನ ಪರಿಷತ್ ನಿದೇರ್ಶಕರಾಗಿ ಆಯ್ಕೆಯಾದ ಉಪನ್ಯಾಸಕ ಎ.ವಿ. ಹಳ್ಳಿಕೇರಿ ಹಾಗೂ ಪುಟ್ಟರಾಜ ಗಾನ ಕೋಗಿಲೆ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿವು ವಾಲಿಕಾರ ಮತ್ತು ಭಕ್ತಿಸೇವೆ ವಹಿಸಿಕೊಂಡ ನೀಲಮ್ಮ ಬಸಯ್ಯ ಗಿಂಡಿಮಠ ಕುಟುಂಬದವರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ಎ.ವಿ. ಹಳ್ಳಿಕೇರಿ ಮಾತನಾಡಿದರು. ಪ್ರಜ್ವಲ ಶಿದ್ಲಿಂಗ್ ಧರ್ಮಗ್ರಂಥ ಪಠಿಸಿದರು. ಪ್ರತೀಕ್ಷಾ ಶಿದ್ಲಿಂಗ್ ವಚನ ಚಿಂತನ ಗೈದರು. ಅನಿತಾ ನವಲಗುಂದ, ಶಿವಕುಮಾರ ಕುಬಸದ ಸಂಗೀತ ಸೇವೆ ಸಲ್ಲಿಸಿದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ, ಎಚ್. ವೀರೂಪಾಕ್ಷಗೌಡ್ರ, ಬಸವರಾಜ ದೇಸಾಯಿ, ಕೊಟ್ರೇಶ ಅಂಗಡಿ, ಧ್ರುವಕುಮಾರ ಹೊಸಮನಿ, ಎಸ್.ಬಿ. ಕರಿಭರಮಗೌಡ್ರ, ದೇವೇಂದ್ರಪ್ಪ ರಾಮೇನಹಳ್ಳಿ, ಶಿವಯೋಗಿ ಕೊಪ್ಪಳ, ಶಂಕರ ಕುಕನೂರ, ನಾಗೇಶ ಹುಬ್ಬಳ್ಳಿ, ಈಶಣ್ಣ ಬೆಟಗೇರಿ, ಎ.ಪಿ. ದಂಡಿನ, ಪಾಲಾಕ್ಷಿ ಗಣದಿನ್ನಿ, ಸದಾಶಿವಯ್ಯ ಕಬ್ಬೂರಮಠ, ಇತರರು ಉಪಸ್ಥಿತರಿದ್ದರು.
ಗಿರೀಶಗೌಡ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.