ಶ್ರೀರಂಗಪಟ್ಟಣ: ಧರ್ಮ, ಸಂಸ್ಕೃತಿಯ ಪರಂಪರಾಗತ ಆಚರಣೆಗಳ ಉಳಿವಿನೊಂದಿಗೆ ಕರೊನಾದಂತಹ ಕ್ಲಿಷ್ಟಕರ ಸಮಯದಲ್ಲೂ ಸಾಮಾಜಿಕ ಕಾಳಜಿ ಮೆರೆದು ತನ್ನ ನೈತಿಕ ಬದ್ಧತೆಯನ್ನು ಚಂದ್ರವನ ಆಶ್ರಮ ತೋರಿರುವುದು ಶ್ಲಾಘನೀಯ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಪಟ್ಟಣದ ಹೊರವಲಯದ ಪೂರ್ವವಾಹಿನಿಯ ಚಂದ್ರವನ ಆಶ್ರಮದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ನವರಾತ್ರಿ ಆಚರಣೆಯ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ, ಜತೆಗೆ ಶ್ರೀಪಾರ್ವತಿ ಫಲಪ್ರದಾಯಿನಿ ಕಿರುಹೊತ್ತಗೆ ಬಿಡುಗಡೆ ಮಾಡಿ ಮಾತನಾಡಿದರು.
ಸನಾತನ ಧರ್ಮ ಮತ್ತು ಸಂಸ್ಕೃತಿ ಸಂಪ್ರದಾಯಗಳ ಆಧಾರ ಹಾಗೂ ಗುರು ಪರಂಪರೆಯ ಆಶೀರ್ವಾದದ ಮೇಲೆ ನಿಂತಿರುವ ಭಾರತ ದೇಶಕ್ಕೆ ಎಂದಿಗೂ ವಿನಾಶ ಎಂಬುದಿಲ್ಲ. ಕರೊನಾದಂತಹ ಕಾಣದ ರೋಗ ದೇಶವನ್ನು ಕಾಡಿದ ಸಮಯದಲ್ಲೂ ಡಾ.ತ್ರಿನೇತ್ರ ಮಹಾಂತ ಶ್ರೀಗಳ ನೇತೃತ್ವದ ಚಂದ್ರವನ ಮಠ ಧರ್ಮವನ್ನಷ್ಟೇ ಕಾಪಾಡದೆ ಸಮಾಜದ ಜನರ ಉಳಿವಿಗಾಗಿ ನೈತಿಕ ಸಹಾಯ ತೋರಿದೆ. ಶತಾಯುಷಿ ಮರಿದೇವರು ಶಿವಯೋಗಿ ಶ್ರೀಗಳ ದಾರಿದೀಪದಂತೆ ಚಂದ್ರವನ ಆಶ್ರಮ ವಿದ್ಯಾರ್ಥಿಗಳು ಸೇರಿದಂತೆ ಜನರಿಗೆ ಆಶ್ರಯ, ಅನ್ನದಾನ ಮತ್ತು ಶಿಕ್ಷಣವನ್ನು ನೀಡುವ ಕಲ್ಯಾಣ ಸೇವೆಗೆ ನನ್ನಿಂದಾಗುವ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಶಾಸಕ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಚಂದ್ರವನ ಆಶ್ರಮ ಈ ಭಾಗದ ಮಹಿಳೆಯರು ಹಾಗೂ ಮಕ್ಕಳ ಪಾಲಿಗೆ ಧಾನ್ಯ ಮಡಿಲು, ವಿದ್ಯೆಯ ಮಡಿಲು ತುಂಬಿ ಹಲವರ ಪಾಲಿಗೆ ತವರು ಮಠವಾಗಿ ಬಿಂಬಿಸಿಕೊಂಡಿದೆ. ಡಾ.ತ್ರಿನೇತ್ರ ಮಹಾಂತ ಸ್ವಾಮೀಜಿ ಅವರ ಸೇವೆ ಹಾಗೂ ಲೋಕ ಕಲ್ಯಾಣಕ್ಕಾಗಿ ಕೈಗೊಳ್ಳುತ್ತಿರುವ ಧಾರ್ಮಿಕ ಕಾರ್ಯಗಳು ಎಂದಿಗೂ ಅನನ್ಯ ಎಂದರು.
ಇದಕ್ಕೂ ಮೊದಲು ಆಶ್ರಮದಲ್ಲಿ ಶ್ರೀಚಾಮುಂಡೇಶ್ವರಿ ದೇವಿಗೆ ಚಂಡಿಕಾ ಹೋಮ, ನವಗ್ರಹ ಹೋಮ, ಕನ್ನಿಕಾ ಪೂಜೆ ಪಾರ್ವತಿ ದೇವಿಗೆ ಪಾರ್ವತಿ ಫಲಪ್ರದಾಯಿನಿ ಪೂಜೆಗಳೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ದಂಪತಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ, ಹೋಮ ಕುಂಡಲಿಗೆ ಪೂಜೆ ಅರ್ಪಿಸಿದರು. ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ನೇತೃತ್ವದಲ್ಲಿ ಮುತ್ತೈದೆಯರಿಗೆ ಮಡಿಲು ತುಂಬಿಸುವ ಕಾರ್ಯ ನೆರವೇರಿತು.
ಮಂಡ್ಯ ಜಿಪಂ ಮಾಜಿ ಅಧ್ಯಕ್ಷ ತಗ್ಗಳ್ಳಿ ವೆಂಕಟೇಶ್, ಬೆಂಗಳೂರಿನ ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಸಿ.ಅಶೋಕ್, ಮೈಸೂರು ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಕೊಡಗಿನ ಜಿಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಪುಷ್ಪಲತಾ ರಾಜಣ್ಣ ಸೇರಿದಂತೆ ಇತರರು ಭಾಗಿಯಾಗಿದ್ದರು.