ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಬುಧವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್.ಎನ್.ಗೋಪಾಲಸ್ವಾಮಿ ಮಾತನಾಡಿದರು. ಎನ್.ಯತೀಶ್, ಸಂದೇಶ್‌ಕುಮಾರ್, ಅಕ್ರಮ್, ರೇಖಾ ಇತರರು ಇದ್ದರು. 
ಜಿಲ್ಲೆ

ಧರ್ಮ ಸಂಘರ್ಷಕ್ಕೆ ಆಸ್ಪದ ಬೇಡ

ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ದೈವಿಕ ಹಾಗೂ ಪಾರಂಪರಿಕ ಸ್ಮಾರಕಗಳುಳ್ಳ ಶ್ರೀರಂಗಪಟ್ಟಣ ಕೋಮುಸೌಹಾರ್ದತೆ ನೆಲೆಯಾಗಿದೆ. ಇಲ್ಲಿ ಯಾರೂ ಧರ್ಮ ಸಂಘರ್ಷಗಳಿಗೆ ಆಸ್ಪದ ನೀಡಬಾರದು. ನಿಮ್ಮ ಧರ್ಮಗಳ ಆಚರಣೆಗಳನ್ನು ಶಾಂತಿಯುತವಾಗಿ ನಡೆಸಬೇಕೆಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಡಿ. 4 ರಂದು ನಡೆಯಲಿರುವ ಮೂಡಲುಬಾಗಿಲು ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಬುಧವಾರ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆ ರೈತರು ಹಾಗೂ ರೈತ ಚಳವಳಿಗಳನ್ನು ಕಂಡ ನೆಲ. ಅಪ್ಪಟ ಜಾನಪದ ನೆಲೆಗಟ್ಟಿನ ಮಣ್ಣಿನ ಜನರು ಭಾವೈಕ್ಯತೆ ಹಾಗೂ ಮಾನವೀಯತೆಯಲ್ಲಿ ಶ್ರೀಮಂತರು. ಪಟ್ಟಣದಲ್ಲಿ ನಡೆಯಲಿರುವ ಹನುಮ ಮಾಲಾಧಾರಿಗಳ ಸಂಕೀರ್ತನ ಯಾತ್ರೆಗೆ ಜಿಲ್ಲಾಡಳಿತದಿಂದ ಯಾವುದೇ ವಿರೋಧವಿಲ್ಲ. ಆದರೆ ಇತರ ಧರ್ಮ ಮತ್ತು ಕೋಮುಗಳ ಪ್ರಚೋದನೆ, ಅನ್ಯಧರ್ಮಿಯರಿಗೆ ನೋವಾಗುವಂತೆ ವರ್ತನೆ, ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಶಾಂತಿ, ಸಂಯಮ ಮತ್ತು ಶಿಸ್ತಿನಿಂದ ಆಚರಿಸಬೇಕು. ನಿಮ್ಮ ಧಾರ್ಮಿಕ ಆಚರಣೆಯಿಂದ ಎಲ್ಲರಿಗೂ ಒಳ್ಳೇಯದಾಗಬೇಕೆ ಹೊರತು ಅಶಾಂತಿಗೆ ಅವಕಾಶ ಕಲ್ಪಿಸಬಾರದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಕಳೆದ 7 ವರ್ಷಗಳಿಂದಲೂ ಸಂಕೀರ್ತನಾ ಯಾತ್ರೆಯನ್ನು ಶಾಂತಿಯುತವಾಗಿ ಆಚರಿಸಲಾಗುತ್ತಿದೆ. ಈ ಬಾರಿ 8ನೇ ವರ್ಷದ ಆಚರಣೆಯನ್ನು ಯಶಸ್ವಿಗೊಳಿಸಿ. ಕಳೆದ ವರ್ಷದಂತೆ ನಿಮ್ಮ ಕೋಮಿನ ಜನರ ನಿಯಂತ್ರಣಕ್ಕೆ ನೀವೇ ಸ್ವಯಂಸೇವಾ ಕಾರ್ಯಕರ್ತರನ್ನು ನಿಯೋಜಿಸಿ, ನೀವೇ ಜವಾಬ್ದಾರಿ ನಿರ್ವಹಿಸಿ. ಯಾವುದೇ ಗೊಂದಲ ಹಾಗೂ ಹಿಂಸಾಚಾರಕ್ಕೆ ಅವಕಾಶ ನೀಡದೆ ರಕ್ಷಣೆಗೆ ಸಹಕಾರ ನೀಡಿ. ಒಂದು ವೇಳೆ ನಿಯಮ ಮೀರಿದರೆ ಮುಂದೆ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮೊದಲು ಸಭೆಯಲ್ಲಿ ಹಿಂದು ಮುಖಂಡರು ಮಾತನಾಡಿ, ಸಂಕೀರ್ತನಾ ಯಾತ್ರೆಯ ವೇಳೆ ಅನ್ಯಕೋಮಿನ ಹೊರಗಿನ ಊರುಗಳ ಯುವಕರು ಪಟ್ಟಣಕ್ಕೆ ಆಗಮಿಸಿ ಬೈಕ್‌ಗಳಲ್ಲಿ ಮೂರ್ನಾಲ್ಕು ಜನರು ಕುಳಿತು ಓಡಾಡುವುದು, ಅನವಶ್ಯಕವಾಗಿ ವಿಡಿಯೋ ಚಿತ್ರೀಕರಣ ಮಾಡುವ ಹಾಗೂ ಅಕ್ರಮವಾಗಿ ಗುಂಪು ಸೇರಿ ಚರ್ಚಿಸುವ ನಡೆಗಳನ್ನು ನಿಯಂತ್ರಿಸಿ ಎಂದು ಒತ್ತಾಯಿಸಿದರು.
ಮುಸ್ಲಿಂ ಮುಖಂಡರು ಮಾತನಾಡಿ, ಹನುಮ ಸಂಕೀರ್ತನಾ ಮೆರವಣಿಗೆಗೆ ನಮ್ಮಿಂದ ಯಾವುದೇ ವಿರೋಧವಿಲ್ಲ. ಆದರೆ ನಮ್ಮ ಕೋಮಿನ ಜನರು, ಸ್ಮಾರಕ ಅಥವಾ ಇತರ ಧಾರ್ಮಿಕ ವಿಚಾರಗಳನ್ನು ಪ್ರಚೋದಿಸುವ ಕೆಲಸ ಯಾರಿಂದಲೂ ಆಗದಂತೆ ಕಟ್ಟುನಿಟ್ಟಿನ ಕ್ರಮವಹಿಸಿ. ಪಟ್ಟಣದಲ್ಲಿ ಮುಸ್ಲಿಂ ಹಾಗೂ ಹಿಂದುಗಳು ಸ್ನೇಹ, ಪ್ರೀತಿ, ಭಾವೈಕ್ಯತೆಯಿಂದ ನೆಲೆಸಿದ್ದೇವೆ. ಆದರೆ ಹೊರಗಿನ ಜನರ ಕಿಡಿಗೇಡಿತನಕ್ಕೆ ನಾವು ಬಲಿಯಾಗಬಾರದೆಂಬ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಡಿವೈಎಸ್ಪಿ ಸಂದೇಶ್‌ಕುಮಾರ್, ಉಪವಿಭಾಗಾಧಿಕಾರಿ ಅಕ್ರಮ್, ಉಪತಹಸೀಲ್ದಾರ್ ರೇಖಾ, ಸಿಪಿಐಗಳಾದ ಪ್ರಕಾಶ್, ಬಿ.ಜಿ.ಕುಮಾರ್, ಸುಮಾರಾಣಿ, ಪಿಎಸ್‌ಐ ರೇಖಾ, ಲಿಂಗರಾಜು, ರಸೂಲ್ ಸಾಬ್, ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಚಾಲಕ ಚಂದನ್, ತಾಲೂಕು ಸಂಚಾಲಕ ಶ್ಯಾಂಸುಂದರ್, ಮುಖಂಡರಾದ ಹರ್ಷ, ಮದನ್‌ಗೌಡ, ವಕೀಲ ಬಾಲರಾಜು, ಶಿವು, ನಂದೀಶ್, ಗುಂಬಜ್‌ನ ವಕ್ಫ್ ಕಾರ್ಯದರ್ಶಿ ಇರ್ಫಾನ್ ಮಜರ್, ಸದಸ್ಯ ಎಕ್ಬಾಲ್, ಮುಖಂಡರಾದ ಉಬೇದುಲ್ಲಾ, ಮುಜೀಬ್ ಪಾಷ, ಅಬ್ದುಲ್ ರೆಹಮಾನ್, ಅಕ್ರಂಪಾಷ, ಅಯೂಬ್, ಏಜಾಜ್ ಪಾಷ, ಸೈಯದ್ ರಿಯಾಜ್, ಕಾಬೂಲ್ ಇತರರು ಇದ್ದರು.