ಶೃಂಗೇರಿ: ಧರ್ಮ ಮಾರ್ಗದಲ್ಲಿ ನಡೆದರೆ ಶ್ರೇಯಸ್ಸು ಲಭ್ಯವಾದರೆ, ಅಧರ್ಮದಿಂದ ದುಃಖ ಪ್ರಾಪ್ತಿಯಾಗುತ್ತದೆ ಎಂದು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.
ಶೃಂಗೇರಿ ಗುರುನಿವಾಸಕ್ಕೆ ಭಾನುವಾರ ನಾನಾ ಪ್ರಾಂತ್ಯಗಳಿಂದ ಆಗಮಿಸಿದ್ದ ದೇವಾಡಿಗ ಸಮಾಜದ ಭಕ್ತರ ಗುರುವಂದನಾ ಕಾರ್ಯಕ್ರಮದಲ್ಲಿ ಅನುಗ್ರಹ ಭಾಷಣ ಮಾಡಿದರು.
ಆಧುನಿಕ ಜಗತ್ತಿನಲ್ಲಿ ಎಲ್ಲ ಸೌಕರ್ಯಗಳಿವೆ. ಆಧುನಿಕ ವಸ್ತುಗಳನ್ನು ತಯಾರು ಮಾಡುವಂತಹ ಬುದ್ಧಿಶಕ್ತಿಯೂ ನಮ್ಮಲ್ಲಿದೆ. ಎಲ್ಲ ಸೌಕರ್ಯಗಳು ನಮಗಿದ್ದರೂ ಲೌಕಿಕ ಜಗತ್ತಿನಲ್ಲಿ ದುಃಖವೂ ಇದೆ. ಇದರಿಂದ ವಿಮುಕ್ತರಾಗಲು ಪ್ರತಿಯೊಬ್ಬರೂ ಧರ್ಮದ ಆಚರಣೆ ಮಾಡಬೇಕು. ಆಗ ಸುಖ ನಮ್ಮನ್ನು ಹಿಂಬಾಲಿಸಲು ಸಾಧ್ಯ ಎಂದರು.
ಪ್ರಪಂಚದಲ್ಲಿ ಧರ್ಮಾಚರಣೆ ಎಂಬುದು ಸಾವಿರಾರು ವರ್ಷಗಳಿಂದ ಬಂದ ಮೌಲ್ಯ. ಇನ್ನೂ ಸಾವಿರ ವರ್ಷ ಕಳೆದರೂ ಧರ್ಮ ಉಳಿಯುತ್ತದೆ. ಅದು ಎಂದಿಗೂ ಬದಲಾವಣೆ ಆಗುವ ವಸ್ತುವಲ್ಲ. ಪ್ರಪಂಚದಲ್ಲಿ ಪರಿವರ್ತನೆಗಳು ಆಗುತ್ತಲೇ ಇದ್ದರೂ ಧರ್ಮ ನೀಡುವ ಲಗಳಲ್ಲಿ ಯಾವುದೇ ಪರಿವರ್ತನೆ ಆಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪುಸ್ತಕ ಓದಬೇಕು. ಪುಸ್ತಕ ಬರೆದವರು ಜ್ಞಾನಿಗಳು. ಪುಸ್ತಕದ ವಿಷಯ ತಿಳಿಸುವವರು ಗುರುಗಳು. ಗುರು ಹೇಳಿದ ಪಾಠಗಳಿಂದ ನಾವು ಹೆಚ್ಚು ಅಂಕ ಗಳಿಸಲು ಸಾಧ್ಯ. ಹಾಗೆಯೇ ಭಗವಂತ ಹೇಳಿದ ಮಾತು ಋಷಿಗಳಿಂದ ಪ್ರಾರಂಭಗೊಂಡು ಗುರುಪರಂಪರೆ ತನಕ ನಿರಂತರವಾಗಿ ಪರಿಮೂಡಿದೆ ಎಂದು ತಿಳಿಸಿದರು.
ಸೃಷ್ಟಿ ಪ್ರಾರಂಭದಿಂದಲೇ ಸನಾತನ ಧರ್ಮ ಆರಂಭವಾಗಿದೆ. ಅತ್ಯಂತ ಪ್ರಾಚೀನವಾದ ಸನಾತನ ಧರ್ಮದ ಜತೆ ಧರ್ಮದ ಮೌಲ್ಯ ಮಿಳಿತಗೊಂಡಿದೆ. ಈ ಧರ್ಮ ಅತ್ಯಂತ ಉತ್ಕೃಷ್ಟವಾದುದು. ಇದರ ಮೌಲ್ಯಗಳನ್ನು ನಾವು ಅರಿತುಕೊಳ್ಳಬೇಕು. ಯಾವುದು ಧರ್ಮ-ಯಾವುದು ಅಧರ್ಮ ಎಂಬುದನ್ನು ನಾವು ಅರಿತುಕೊಳ್ಳಬೇಕಾದರೆ ಗುರುಗಳ ಅವಶ್ಯಕತೆ ಸರ್ವರಿಗೂ ಇದೆ. ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ನಮ್ಮ ಜೀವನದಲ್ಲಿ ಶ್ರೇಯಸ್ಸು ಲಭ್ಯವಾಗಲು ಸಾಧ್ಯ ಎಂದರು.