ಮಾಂಜರಿ: ಧರ್ಮ ಪಾಲನೆಯಿಂದ ದೇಶದಲ್ಲಿ ಶಾಂತಿ ಲಭಿಸಲಿದೆ. ಇಂದು ಧರ್ಮದ ಹೆಸರಿನಲ್ಲಿ ಭಯದ ವಾತಾವರಣ ಸೃಷ್ಟಿಸಿ ಭಾವನಾತ್ಮಕವಾಗಿ ಕೆರಳಿಸಲಾಗುತ್ತಿರುವುದು ಕಳವಳಕಾರಿ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀಕಾಡಸಿದ್ಧೇಶ್ವರ ಸಂಸ್ಥಾನ ಮಠದಲ್ಲಿ ಅಮಾವಾಸ್ಯೆ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಧರ್ಮ ಸಭೆ ಮತ್ತು ಅಧ್ಯಾತ್ಮ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ನೈತಿಕತೆ ಅಧಃಪತನವಾಗಿದೆ. ಜಗತ್ತಿನ ಎಲ್ಲ ಕಡೆ ಆತಂಕ ಇದೆ. ಆದರೆ, ದಯವೇ ಧರ್ಮದ ಮೂಲ ಎನ್ನುವಂತೆ ಎಲ್ಲದಕ್ಕೂ ಧರ್ಮದಿಂದ ಉತ್ತರ ಕಂಡುಕೊಳ್ಳಬಹುದು. ಅಂಧಕಾರ, ಮೌಢ್ಯವೇ ತುಂಬಿದ್ದ ೧೨ನೇ ಶತಮಾನದಲ್ಲಿ ಸ್ವಾತಂತ್ರ‍್ಯ, ಸಮಾನತೆ, ಸಹೋದರತೆ, ಸಹಬಾಳ್ವೆ, ಜಾತಿರಹಿತ ಸಮಾಜ ನಿರ್ಮಿಸಲು ಶರಣರು ಕ್ರಾಂತಿ ಮಾಡಿದ್ದಾರೆ. ಪ್ರಜಾಪ್ರಭುತ್ವದ ಪರಿಕಲ್ಪನೆ ಬರುವ ಮುನ್ನವೇ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಬಸವಣ್ಣವನವರು ಕೊಟ್ಟಿದ್ದಾರೆ. ಸರ್ಕಾರಕ್ಕಿಂತಲೂ ಮಿಗಿಲಾಗಿ ಮಠಮಾನ್ಯಗಳು ಅಕ್ಷರ, ಅನ್ನದಾಸೋಹ ನೀಡುತ್ತಿವೆ ಎಂದು ಹೇಳಿದರು.
ಮಹಾಂತೇಶ ಕವಟಗಿಮಠ ಕ್ರೆಡಿಟ್ ಸೌಹಾರ್ದ ಸಂಸ್ಥೆ ಅಧ್ಯಕ್ಷ ಶರತ್ ಕವಟಿಗಿಮಠ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿಯಾದರೂ ಜಗತ್ತಿನಲ್ಲಿ ಶಾಂತಿ ಸ್ಥಾಪನೆ ಸಾಧ್ಯವಾಗಿಲ್ಲ. ಅಸಮಾಧಾನ, ಹಿಂಸೆ, ಅಸಹಿಷ್ಣ್ಣುತೆ ಹೆಚ್ಚಾಗಿದೆ. ಎಲ್ಲದಕ್ಕೂ ಬಸವ ತತ್ತ್ವದಲ್ಲಿ ಪರಿಹಾರವಿದೆ. ೧೨ನೇ ಶತಮಾನದ ಬಸವಣ್ಣ ಅವರ ಕಾಯಕ ತತ್ತ್ವವನ್ನು ಇಂದಿನ ಮಠಾಽಧಿಶರು ಅನುಷ್ಠಾನಗೊಳಿಸುತ್ತ ಸಮಾಜ ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಮಠಗಳು, ಧಾರ್ಮಿಕ ಸಂಸ್ಥೆಗಳು ಶಿಕ್ಷಣ ಸಂಸ್ಥೆ ತೆರೆಯದಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು ಎಂಬುವುದನ್ನು ಅವಲೋಕಿಸಬೇಕು ಎಂದರು.
ಚಂದುರು ಗ್ರಾಮದ ಬಾಳಗೌಡ ಪಾಟೀಲ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತರೂ ಸಂಸ್ಕಾರ ಕೊಡುವಲ್ಲಿ ಎಡವಿದ್ದೇವೆ. ಕುಟುಂಬದ ವ್ಯವಸ್ಥೆ ಹೋಗಿದೆ. ತಂತ್ರಜ್ಞಾನದ ಭರಾಟೆಯಿಂದ ಪರಂಪರೆ, ಸಂಸ್ಕೃತಿ ಮರೆತು ಮನುಷ್ಯತ್ವ ಕಳೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಯಡೂರ ದೇವಸ್ಥಾನದ ಉತ್ತರಾಽಕಾರಿ ಶ್ರೀರೇಣುಕಾದೇವರು, ಉಪ್ಪರಗಿ ಹಿರೇಮಠದ ಉತ್ತರಾಽಕಾರಿ ಅಭಿಷೇಕ ದೇವರು ಇದ್ದರು.