ಬಾಗಲಕೋಟೆ: ಧರ್ಮ ಹಾಗೂ ದೇಶದ ವಿಷಯದಲ್ಲಿ ನಾವು ಬಿಜೆಪಿಯಿಂದ ಕಲಿಯಬೇಕಾ? ಧರ್ಮ ಮತ್ತು ದೇಶದ ವಿಚಾರದಲ್ಲಿ ಕಾಂಗ್ರೆಸ್ ಮಾಡಿರುವ ಕೆಲಸವನ್ನು ಬಿಜೆಪಿಗೆ ಯಾವಾಗಲೂ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಆರ್.ಬಿ.ತಿಮ್ಮಾಪುರ ಕಮಲ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅವರು ರಾಮ ಮಂದಿರ ಕಟ್ಟಿದ್ದು ನಾವೇ. ಇದು ಬಿಜೆಪಿಯವರು ಕಟ್ಟಿದ್ದು ಎಂದರೆ ಹೇಗೆ? ತಮ್ಮ ಪಕ್ಷದ ಆಸ್ತಿ ತರಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂದೆ ಕಾಂಗ್ರೆಸ್ ಪಕ್ಷ ಬಂಗಾರಪ್ಪ ಸಿಎಂ ಇದ್ದಾಗ ದೇವಸ್ಥಾನ ನಿರ್ಮಾಣಕ್ಕಾಗಿಯೇ ಆರಾಧನ ಎನ್ನುವ ಯೋಜನೆ ತಂದಿದ್ದರು. ಆಗ ಪ್ರತಿ ಹಳ್ಳಿ ಹಳ್ಳಿಯಲ್ಲಿ ದೇವಸ್ಥಾನ ಕಟ್ಟಲಾಗಿದೆ. ಧರ್ಮ ಎಂದರೆ ಬರೀ ದೊಡ್ಡವರು, ಶ್ರೀಮಂತರಲ್ಲ. ಸಣ್ಣ ಸಣ್ಣ ಜಾತಿಯವರಿಗೆ ಮಂದಿರ ಕಟ್ಟಲು ಆಗಲ್ಲ. ಆದರೆ, ಅವರು ಅಪಾರ ದೈವ ಭಕ್ತರು. ಅವರೆಲ್ಲ ದುರ್ಗಮ್ಮ ದೇವರಿಗೆ ಕೈ ಮುಗಿಯುತ್ತಾರೆ. ಅಂತವರಿಗೆಲ್ಲ ನಾವು ಮಂದಿರ ಕಟ್ಟಿಕೊಟ್ಟಿದ್ದೇವೆ. ನಾವು ಅದೆಷ್ಟೋ ದೇವಾಲಯ ಕಟ್ಟಿದ್ದೇವೆ, ಕಟ್ಟುತ್ತಲೇ ಇರುತ್ತೇವೆ. ಅದನ್ನು ರಾಜಕೀಯವಾಗಿ ಮಾತ್ರ ಬಳಕೆ ಮಾಡಲ್ಲ. ಇವರು(ಬಿಜೆಪಿ) ರಾಮಮಂದಿರವನ್ನು ರಾಜಕೀಯವಾಗಿ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.
ನೀವು ರಾಮ ಮಂದಿರಕ್ಕೆ ಯಾಕೆ ಹೋಗಲ್ಲ ಎನ್ನುತ್ತಾರೆ. ಅರೇ ನಾನು ದುರ್ಗವ್ವನ ಹತ್ತಿರ ಅಷ್ಟೆ ನಮಸ್ಕಾರ ಮಾಡುತ್ತೇನೆ. ಬಬಲಾದಿ ಸದಾಶಿವಗೆ ಅಲ್ಲಿಯೇ ಹೋಗಿ ನಮಸ್ಕಾರ ಮಾಡುತ್ತೇನೆ. ನನ್ನ ಭಾವನೆ, ನನ್ನ ಬದುಕು. ನಾನು ಯಾವ ದೇವರಿಗೆ ಹೋಗಬೇಕು ಎನ್ನುವುದು ನನಗೆ ಬಿಟ್ಟ ವಿಚಾರ. ಇವರು(ಬಿಜೆಪಿ) ಮಾಡುತ್ತಿರುವುದೇನು? ಸಿದ್ದರಾಮಯ್ಯ ರಾಮಮಂದಿರಕ್ಕೆ ಹೋಗುತ್ತಾರೋ ಇಲ್ಲವೋ? ಹೋಗಲ್ಲ ಅಂದ್ರಾ ಅವರು ಹಿಂದು ಧರ್ಮ ವಿರೋಽ. ಅರೇ ನಾವು ಅದೇ ಹಿಂದು ಧರ್ಮದಲ್ಲಿ ಇದ್ದವರು. ಎಷ್ಟೋ ವರ್ಷಗಳಿಂದ ಅಸ್ಪÈಶ್ಯತೆ ಅನುಭವಸಿದರೂ ನನ್ನ ಹಿಂದು ಧರ್ಮ ಎನ್ನುವ ಭಾವನಾಜೀವಿಗಳು. ಅಷ್ಟೆಲ್ಲ ನೋವು ಉಂಡರೂ ಇವತ್ತಿಗೂ ನನ್ನ ಧರ್ಮ ಹಿಂದು ಎಂದು ಹೇಳಿಕೊಳ್ಳುತ್ತೇನಲ್ಲ ನಾನೇ ಶ್ರೇಷ್ಠ ಎಂದು ಸಚಿವ ತಿಮ್ಮಾಪುರ ಹೇಳಿಕೊಂಡರು.
ಬಿಜೆಪಿಯವರ ನಡುವಳಿಕೆಯಿಂದ ಶ್ರೀರಾಮ ಬಿಜೆಪಿಯ ದೇವರು ಎನ್ನುವಂತಾಗಿದೆ. ನಮಗೂ ರಾಮನ ಬಗ್ಗೆ ಭಕ್ತಿ ಇದೆ. ಆದರೂ ನಮ್ಮ ದೇವರು ಸಾವಿರಾರು ಇವೆ. ಎಲ್ಲ ದೇವರುಗಳನ್ನು ಪ್ರೀತಿಯಿಂದ ಕಾಣುತ್ತೇವೆ. ಅವರು(ಬಿಜೆಪಿ) ಬರೀ ರಾಮ ಎನ್ನುತ್ತಾರೆ. ಇವರಿಗೆ ನಮ್ಮ ಯಲ್ಲವ್ವ, ದುರ್ಗವ್ವನ ಗುಡಿಗಳು ಡೆವಲಪ್ ಆಗಬಾರದು ಎಂದು ತಿರುಗೇಟು ಕೊಟ್ಟರು.