ಮುಂಡರಗಿ: ಅಧ್ಯಾತ್ಮವು ಧರ್ಮ, ಜಾತಿಗೆ ಮೀಸಲಲ್ಲ. ಮನಸ್ಸಿನ ಶಾಂತಿ, ನೆಮ್ಮದಿಗೆ ಅಧ್ಯಾತ್ಮದ ಅರಿವು ಇದ್ದರೆ ಸುಖ, ಸಂತಸದ ಬದುಕು ನಿರ್ವಣವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ವಿರೂಪಾಪುರ ಕಲಕೇರಿ ಶ್ರೀ ಮುದುಕೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಮುದುಕೇಶ್ವರ ಮಠದ ಮಹಾದ್ವಾರ ಲೋಕಾರ್ಪಣೆ ಮತ್ತು ಶ್ರೀ ಮಠದ ಚರಿತ್ರೆ ಗ್ರಂಥ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಶಿಕ್ಷಣ, ಆರೋಗ್ಯ, ಅಧ್ಯಾತ್ಮ ಉಳಿಸಿ, ಬೆಳೆಸುವ ಕಾರ್ಯವಾಗಬೇಕು. ಶಿಕ್ಷಣದಿಂದ ಮನುಷ್ಯನ ಬುದ್ಧಿಶಕ್ತಿ ಬೆಳೆಯುತ್ತದೆ. ಧರ್ಮದಿಂದ ಭಾವನೆಗಳು ಬೆಳೆಯುತ್ತವೆ. ಭಾವನೆಗಳು, ಬುದ್ಧಿಶಕ್ತಿ ಬೆಳೆಯಬೇಕು ಎನ್ನುವುದು ನಾಡಿನ ಧರ್ಮ ಪೀಠಗಳ ಮತ್ತು ಮಠಾಧೀಶರ ಆಶಯವಾಗಿದೆ. ಏನೆಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಬಹುಮುಖ್ಯವಾದದ್ದು ಎಂದರು.
ಡಾ. ಹಿರಿಯ ಶಾಂತವೀರ ಸ್ವಾಮೀಜಿ ಮಾತನಾಡಿ, ಸಂಸ್ಕಾರದ ತೋರಣ ಕಟ್ಟಲು ಗುರುಗಳ, ಹಿರಿಯರ ಮಾರ್ಗದರ್ಶನ ಅವಶ್ಯ. ಧರ್ಮ ಇದ್ದರೆ ಸಂಸ್ಕೃತಿ, ಸಂಸ್ಕಾರ, ತತ್ತ್ವ ವಿಚಾರ ನೆತ್ತಿ ತುಂಬುತ್ತವೆ ಎಂದರು.
ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ನೀಡಬೇಕು. ಸನಾತನ ಪಂಚಪೀಠಗಳು ಶಾಖಾಮಠಗಳ ಮೂಲಕ ಧರ್ಮ ಕಾರ್ಯ ಮಾಡುತ್ತಿವೆ ಎಂದು ಹೇಳಿದರು.
ಶ್ರೀ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿದರು. ಶಿಕ್ಷಕಿ ಭಾಗ್ಯಲಕ್ಷ್ಮಿ ಬಿಳಿಮಗ್ಗದ ಅವರು ರಚಿಸಿದ ಶ್ರೀ ಮುದುಕೇಶ್ವರ ಮಠದ ಚರಿತ್ರೆ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.
ಪಿ.ಎಂ. ಪಾಟೀಲ, ಅಂದಪ್ಪ ಮೇಟಿ, ಸೋಮಣ್ಣ ದೇಸಾಯಿ, ಶಿವಲಿಂಗಯ್ಯ ಗುರುವಿನ, ಈಶ್ವರಗೌಡ ಪಾಟೀಲ, ವಿರೂಪಾಕ್ಷಪ್ಪ ತಾಮ್ರಗುಂಡಿ, ಎಂ.ಯು. ಮಕಾಂದಾರ, ಎಸ್.ಬಿ. ಪಾಟೀಲ, ಜಯಣ್ಣ ದ್ರಾಕ್ಷಿ, ಇತರರಿದ್ದರು.
ನೂರ್ಅಹ್ಮದ್ ಮಕಾಂದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲನಗೌಡ ಪಾಟೀಲ ಹಾಗೂ ರಮೇಶ ಹುಳಕಣ್ಣವರ ನಿರ್ವಹಿಸಿದರು.