ಜಿಲ್ಲೆ

ಧರ್ಮ, ಜಾತಿ, ಸಮಾನತೆಗೆ ಶ್ರಮಿಸೋಣ:ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಕರೆ

ಹಾಸನ: ಧರ್ಮ, ಜಾತಿ, ಸಮಾನತೆಗೆ ನಾವೆಲ್ಲರೂ ಶ್ರಮಿಸಬೇಕು ಎಂದು ಅರಕಲಗೂಡು ದೊಡ್ಡ ಮಠದ ಮಠಾಧೀಶರಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಹೇಳಿದರು.
ತಾಲೂಕು ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಶ್ರೀ ಸೋಮೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇಂದು ಎಲ್ಲಾ ಗ್ರಾಮಗಳಲ್ಲಿ ಧಾರ್ಮಿಕ ಭಾವನೆ ಹೆಚ್ಚಾಗಿದೆ. ದೇವಸ್ಥಾನದ ನಿರ್ಮಾಣ, ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ಸಂಸ್ಕೃತಿ, ಸಂಸ್ಕಾರ, ಆದರ್ಶ ಜೀವನವನ್ನು ತಾತ್ವಿಕತೆಯೊಂದಿಗೆ ಬದುಕುವ ಜೀವನ ಸಾಗಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಅಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಹಿರಿಯ ಪತ್ರಕರ್ತ ರವಿ ನಾಕಲಗೂಡು, ನಾವು ಧರ್ಮದ ಹಾದಿಯಲ್ಲಿ ನಡೆಯಬೇಕಿದೆ. ನಮ್ಮ ಬದುಕು ಉನ್ನತ ವ್ಯಕ್ತಿತ್ವ ಪಡೆಯಲು ಸಾಧು- ಸಂತರ, ಮಠಾಧೀಶರ ಆಶೀರ್ವಾದ ನಮಗೆ ಬೇಕು. ದೇವರ ಮೇಲೆ ನಂಬಿಕೆಯೊಂದಿಗೆ ನಾವು ಬದುಕುತ್ತಿದ್ದೇವೆ. ಉತ್ತಮ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಡಗಿನ ಕಲ್ಲಮಠದ ಮಠಾಧೀಶರಾದ ಶ್ರೀ ಮಹಾಂತ ಸ್ವಾಮೀಜಿ, ಕಾರ್ಜುವಳ್ಳಿ ರಂಭಾಪುರಿ ಶಾಖಾ ಮಠದ ಮಠಾಧೀಶರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಚಂಗಡಹಳ್ಳಿ ಮಠದ ಮಠಾಧೀಶರಾದ ಶ್ರೀ ಬಸವ ಮಹಾಂತ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಹೋಮ- ಹವನ, ಪೂಜೆ- ಪುನಸ್ಕಾರಗಳು ನಡೆದವು ಹಾಗೂ ಕಳಸಾರೋಹಣ ನೆರವೇರಿಸಲಾಯಿತು.
ಹಾಸನ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ. ಕುಮಾರ್, ಹಾಸನ ಆಕಾಶವಾಣಿ ನಿರ್ದೇಶಕ ಡಾ ವಿಜಯ ಅಂಗಡಿ, ಬ್ಯಾಡರಹಳ್ಳಿ ಗ್ರಾಮದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಬಸಪ್ಪ, ಉಪಾಧ್ಯಕ್ಷ ಬಿ.ಆರ್. ಶಿವಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯ ಮಧುಸೂದನ್, ನಿವೃತ್ತ ಇಂಜಿನಿಯರ್ ಮಹದೇವಪ್ಪ, ಇಂಜಿನಿಯರ್ ಪ್ರಕಾಶ್, ನಿವೃತ್ತ ಶಿಕ್ಷಕ ಸಂಪತ್, ಡೇರಿ ಅಧ್ಯಕ್ಷ ಮಂಜಪ್ಪ ಹಾಗೂ ದೇವಸ್ಥಾನದ ಭಕ್ತರು ಸಾರ್ವಜನಿಕರು ಪಾಲ್ಗೊಂಡಿದ್ದರು.