ಜಿಲ್ಲೆ

ಧರಣಿ ಆರಂಭಿಸಿದ ಅತಿಥಿ ಉಪನ್ಯಾಸಕರು

ಚಿತ್ರದುರ್ಗ: ಸೇವೆ ಕಾಯಂ ಮಾಡುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಜಿಲ್ಲಾ ಸಂಘದ ನೇತೃತ್ವದಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟಿಸಿದ ಉಪನ್ಯಾಸಕರು, ಬೇಡಿಕೆಗಳ ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಬಹುತೇಕ ಅತಿಥಿ ಉಪನ್ಯಾಸಕರ ಸೇವೆ ಅವಲಂಬಿಸಿವೆ. 20ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರ ಬದುಕು ಅತಂತ್ರವಾಗಿದೆ. ಈ ಅನಿಷ್ಟ ಪದ್ಧತಿ ಕೊನೆಗಾಣಿಸಿ ಸೇವೆ ಕಾಯಂ ಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಸೇವೆ ಕಾಯಂ ಗೊಳಿಸುವಂತೆ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದ್ದರು. ಜತೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಪನ್ಯಾಸಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವುದಾಗಿ ಸದನದಲ್ಲಿ ಹೇಳಿಕೆ ನೀಡಿದ್ದರು. ಚುನಾವಣಾ ಪ್ರಣಾಳಿಕೆಯಲ್ಲೂ ಸೇವೆ ಕಾಯಂ ಗೊಳಿಸುವುದಾಗಿ ತಿಳಿಸಿದ್ದರು.
ಪಶ್ಚಿಮಬಂಗಾಳ, ಪಂಜಾಬ್, ಹರಿಯಾಣ, ಹೊಸದಿಲ್ಲಿ, ಆಂಧ್ರಪ್ರದೇಶ, ತೆಲಂಗಾಣ ಮೊದಲಾದ ರಾಜ್ಯಗಳಲ್ಲಿ ಅತಿಥಿ/ಅರೆಕಾಲಿಕ/ಗುತ್ತಿಗೆ ಆಧಾರಿತ ಉಪನ್ಯಾಸಕರ ಸೇವೆ ಕಾಯಂ ಗೊಳಿಸಿರುವ ಉದಾಹರಣೆಗಳಿವೆ. ಆದ್ದರಿಂದ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಸೇವೆ ಕಾಯಂ ಗೊಳಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಬೇಕು ಆಗ್ರಹಿಸಿದರು.
ನಮ್ಮ ಸೇವೆಗೆ ಕಾಲೇಜು, ವಿಶ್ವವಿದ್ಯಾಲಯ ಹಾಗೂ ಸರ್ಕಾರದ ಮಟ್ಟದಲ್ಲಿ ಮನ್ನಣೆ ಸಿಗುತ್ತಿಲ್ಲ. ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದವರಿಗೂ ಸೇವಾ ಭದ್ರತೆ ಇಲ್ಲವಾಗಿದೆ ಎಂದು ಅಳಲು ತೋಡಿಕೊಂಡರು. ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸಿವುದಾಗಿ ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಜಿ.ಎನ್.ಡಾ.ಯಶೋಧರ, ಡಾ.ಜಗದೀಶ್ ಕೆರೆನಳ್ಳಿ, ಡಿ.ಎಂ.ಚಂದನಾ, ಡಾ.ಸಿ.ಗುರುಸ್ವಾಮಿ, ವಿ.ಎಸ್.ಮಂಜುನಾಥ್, ಪರಮೇಶ್, ಡಾ.ಪಾಪಯ್ಯ, ಶಿವಪ್ರಸಾದ್, ಸುವರ್ಣಮ್ಮ, ಪಿ.ಮಂಜಪ್ಪ, ಡಾ.ರಂಗಸ್ವಾಮಿ, ಡಾ.ನಂದಿನಿ, ಆಶಾ, ನಾಗರತ್ನಾ, ದಾಕ್ಷಾಯಿಣಿ, ರೂಪಲಕ್ಷ್ಮೀ, ಹಂಸವೇಣಿ, ಡಾ.ವೆಂಕಟೇಶ್, ನಿಹಾರಿಕಾ, ಫಿರ್ದೊಸ್, ಡಾ.ಸಂತೋಷ್‌ಪವಾರ್, ಮಂಜುಳಾ, ಚಿತ್ತಯ್ಯ ಮತ್ತಿತರರು ಇದ್ದರು.