ಜಿಲ್ಲೆ

ಧಮ್ ಬಿರಿಯಾನಿ ಹೋಟೆಲ್ ಬಂದ್, ದೊಡ್ಡ ಅಮಾನಿ ಕೆರೆ ಬಳಿ ಮಾಂಸ ತ್ಯಾಜ್ಯ ವಿಲೇವಾರಿ ಹಿನ್ನೆಲೆ, ಹೊಸಕೋಟೆ ನಗರಸಭೆ ಅಧಿಕಾರಿಗಳ ಕ್ರಮ

ಹೊಸಕೋಟೆ: ನಗರದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಬಿರಿಯಾನಿ ಹೋಟೆಲ್‌ಗಳಿಗೆ ಕಡಿವಾಣ ಹಾಕಲು ನಗರಸಭೆ ಅಧಿಕಾರಿಗಳು ಮುಂದಾಗಿದ್ದಾರೆ. ದೊಡ್ಡ ಅಮಾನಿಕೆರೆ ಬಳಿ ಮಾಂಸ ತ್ಯಾಜ್ಯ ಬಿಸಾಡಿದ ಆರೋಪದ ಹಿನ್ನೆಲೆಯಲ್ಲಿ ಧಮ್ ಬಿರಿಯಾನಿ ಹೋಟೆಲ್‌ನ ಬಾಗಿಲು ಮುಚ್ಚಿಸಿದ್ದಾರೆ.

ಹೋಟೆಲ್‌ನ ಕೆಲಸಗಾರರು ಮಾಂಸ ತ್ಯಾಜ್ಯ ವಿಲೇವಾರಿ ಮಾಡಿದ್ದ ೆಟೋವನ್ನು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ವೈರಲ್ ಆಗುತ್ತಿರುವಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಶುಕ್ರವಾರ ಬಂದ್ ಮಾಡಿಸಿ, ಮಾಲೀಕರಿಗೆ 5 ಸಾವಿರ ರೂ. ದಂಡ ವಿಧಿಸಿದರು. ಹೋಟೆಲ್‌ನ ಉದ್ದಿಮೆ ಪರವಾನಗಿ ಸೇರಿ ಇತರ ದಾಖಲೆಗಳನ್ನು ಹಾಜರುಪಡಿಸುವಂತೆ ನೋಟಿಸ್ ಜಾರಿ ಮಾಡಿದರು.

ದೊಡ್ಡ ಅಮಾನಿಕೆರೆ ಬಳಿ ಸುರಿಯಲಾಗಿದ್ದ ಮಾಂಸ ತ್ಯಾಜ್ಯ ತೆರವುಗೊಳಿಸಲಾಗಿದೆ. ವಿಲೇವಾರಿ ಮಾಡಿದ ಹೋಟೆಲ್ ಮಾಲೀಕರಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಹೋಟೆಲ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಲು ಸೂಚಿಸಿ, ನೋಟಿಸ್ ನೀಡಲಾಗಿದೆ. ಅವನ್ನು ಪರಿಶೀಲಿಸಿದ ಬಳಿಕ ನಗರಸಭೆ ಆಯುಕ್ತರು ಮುಂದಿನ ಕ್ರಮ ಕೈಗೊಳ್ಳುವರು. ಲಾವಣ್ಯ ನಗರಸಭೆ ಆರೋಗ್ಯ ನಿರೀಕ್ಷಕಿ ಧಮ್ ಬಿರಿಯಾನಿ ಹೋಟೆಲ್‌ಗಳ ಜತೆಗೆ ಪಾನಿಪೂರಿ, ತರಕಾರಿ ಅಂಗಡಿ ಹಾಗೂ ಬೇಕರಿಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ. ಆಹಾರ ಸಿದ್ಧಪಡಿಸುವ ಸ್ಥಳ, ಸಲಕರಣೆಗಳ ಗುಣಮಟ್ಟ, ವ್ಯವಹಾರ ಸ್ಥಳದ, ಕಂದಾಯ ಪಾವತಿ ರಸೀದಿ, ಪರವಾನಗಿ ಸೇರಿ ಎಲ್ಲ ಮಾಹಿತಿಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಮೇಶ್, ನಗರಸಭೆ ಆಯುಕ್ತ