ಎನ್.ಆರ್.ಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಶಿಕ್ಷಕರಾದ ಶ್ರೀಕಾಂತ್, ರಮೇಶನಾಯ್ಕ, ವೀಣಾ ಹಾಗೂ ರಾಜೇಶ್ವರಿ ಅವರನ್ನು ಸನ್ಮಾನಿಸಲಾಯಿತು. ತನುಜಾ ಟಿ. ಸವದತ್ತಿ, ಪೂರ್ಣೇಶ್, ಭಾಗ್ಯಾ ನಂಜುಂಡಸ್ವಾಮಿ, ಎಚ್.ಎಂ.ಶಿವಣ್ಣ, ಪ್ರೇಮಾಶ್ರೀನಿವಾಸ್, ಎ.ಸಿ.ಶ್ರೀನಿವಾಸ್ ಇದ್ದರು. 
ಜಿಲ್ಲೆ

ಧಕ್ಕೆ ಬಂದಾಗ ಜಾತಿ, ಮತ, ಧರ್ಮ ಮರೆತು ಹೋರಾಡಿ

ಎನ್.ಆರ್.ಪುರ: ಕನ್ನಡ ಸುಂದರ ಭಾಷೆಯಾಗಿದ್ದು, ರಾಷ್ಟ್ರದಲ್ಲಿ 3ನೇ ಸ್ಥಾನದಲ್ಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ತಿಳಿಸಿದರು.

ಶುಕ್ರವಾರ ಕುವೆಂಪು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆಗೆ ಛಂದಸ್ಸು, ಲಿಪಿ, ವ್ಯಾಕರಣವಿದೆ. ವಚನ ಸಾಹಿತ್ಯ, ಜಾನಪದ ಸಾಹಿತ್ಯ ಇದೆ. ಕನ್ನಡ ಭಾಷೆಗೆ ಧಕ್ಕೆ ಬಂದಾಗ ಜಾತಿ, ಮತ, ಧರ್ಮ ಮರೆತು ನಾವು ಕನ್ನಡಿಗರು ಎಂದು ಒಟ್ಟಾಗಿ ಹೋರಾಟಕ್ಕೂ ಸಿದ್ಧರಾಗಬೇಕು. ಬೇರೆ ಭಾಷೆ ಗೌರವಿಸಿ. ಆದರೆ, ಕನ್ನಡ ಭಾಷೆ ಪ್ರೀತಿಸಿ ಎಂದರು.

ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನ ಮಾಡಬೇಕು. ಕನ್ನಡ ಶಾಲೆ ಉಳಿದರೆ ಕನ್ನಡ ಭಾಷೆ ಉಳಿದಂತೆ. ಮುಂದಿನ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ ಮಕ್ಕಳನ್ನು ಕಸಾಪದಿಂದ ಸನ್ಮಾನಿಸಲಾಗುವುದು. ಜನವರಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಮಾತನಾಡಿ, ಬೆಳಕಿನ ಹಬ್ಬ ದೀಪಾವಳಿ ಹಾಗೂ ರಾಜ್ಯೋತ್ಸವ ಒಟ್ಟಾಗಿ ಆಚರಿಸಲಾಗುತ್ತಿದೆ. ಕನ್ನಡ ಭಾಷೆ ಬೆಳವಣಿಗೆಗೆ ಕವಿಗಳ ಕೊಡುಗೆ ಅಪಾರವಾಗಿದೆ ಎಂದರು.

ತಹಸೀಲ್ದಾರ್ ತನುಜಾ ಟಿ. ಸವದತ್ತಿ ಮಾತನಾಡಿ, ಕನ್ನಡ ಕಾವ್ಯಕ್ಕೆ ವಿಶ್ವ ಸಾಹಿತ್ಯದಲ್ಲಿ ಸ್ಥಾನ ದೊರಕಿಸಿಕೊಟ್ಟವರು 12ನೇ ಶತಮಾನದ ಬಸವಾದಿ ಶರಣರು. ನಂತರ ಬಂದ ಹರಿಹರ, ರಾಘವಾಂಕರು ಕನ್ನಡ ಕಾವ್ಯಕ್ಕೆ ಹೊಸ ತಿರುವು ಕೊಟ್ಟರು ಎಂದು ಹೇಳಿದರು.

ವಿವಿಧ ಶಾಲೆಗಳ ಶಿಕ್ಷಕರಾದ ಶ್ರೀಕಾಂತ್, ರಮೇಶನಾಯ್ಕ, ವೀಣಾ ಹಾಗೂ ರಾಜೇಶ್ವರಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪಟ್ಟಣದ ಅಂಬೇಡ್ಕರ್ ವತ್ತದಿಂದ ಕುವೆಂಪು ಕ್ರೀಡಾಂಗಣದವರೆಗೆ ಭುವನೇಶ್ವರಿ ಸ್ತಬ್ಧ ಚಿತ್ರ, 100 ಮೀಟರ್ ಕನ್ನಡದ ಭಾವುಟದೊಂದಿಗೆ ಮೆರವಣಿಗೆ ನಡೆಯಿತು. ಕುವೆಂಪು ಕ್ರೀಡಾಂಗಣದಲ್ಲಿ ಪೊಲೀಸ್, ಹೋಂ ಗಾರ್ಡ್ಸ್‌ಗಳಿಂದ ಹಾಗೂ ವಿವಿಧ ಶಾಲೆಯ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಪಪಂ ಅಧ್ಯಕ್ಷೆ ಸುರೈಯಾಭಾನು, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ, ಪ್ರೇಮಾ ಶ್ರೀನಿವಾಸ್, ಜುಬೇದಾ, ಮುನಾವರ್ ಪಾಷಾ, ಮುಕುಂದ, ವಾಸೀಂ, ಕೆ.ಆರ್.ಪುಷ್ಪ್ಪಾ, ಎಚ್.ಎಂ.ಶಿವಣ್ಣ, ಇ.ಸಿ.ಜೋಯಿ, ವಾಲ್ಮೀಕಿ ಶ್ರೀನಿವಾಸ್, ಡಿ.ರಾಮು, ಭವಾನಿ, ಶೆಟ್ಟಿಕೊಪ್ಪ ಮಹೇಶ್, ಬಿಳಾಲುಮನೆ ಉಪೇಂದ್ರ ಇತರರಿದ್ದರು.