ಕೋಲಾರ: ತಾಲೂಕಿನ ಉರಟಿ ಅಗ್ರಹಾರದಲ್ಲಿ ಶನಿವಾರ ರಾತ್ರಿ ಕಿಡಿಗೇಡಿಗಳು ತೋಟಕ್ಕೆ ನುಗ್ಗಿ ಕಲ್ಲಂಗಡಿ ಬೆಳೆಯನ್ನು ನಾಶಪಡಿಸಿದ್ದಾರೆ.
ಗ್ರಾಮದ ಕೆ.ಅಂಬರೀಷ್ ಎಂಬುವರು 6 ಎಕರೆ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದಾರೆ, ಈ ಬಾರಿ 1 ಲಕ್ಷ ರೂ. ಬಂಡವಾಳ ಹಾಕಿ ಕಲ್ಲಂಗಡಿ ಬೆಳೆದಿದ್ದು, ಇನ್ನು 10-15 ದಿನಗಳಲ್ಲಿ ಫಸಲು ಕಟಾವು ಮಾಡಬೇಕಿತ್ತು.
ಅಂಬರೀಷ್ ಕಲ್ಲಂಗಡಿ ತೋಟದಿಂದ ಶನಿವಾರ ರಾತ್ರಿ 9 ಗಂಟೆಗೆ ಮನೆಗೆ ತೆರಳಿದ್ದರು. ಈ ವೇಳೆ ಕಿಡಿಗೇಡಿಗಳು ತೋಟಕ್ಕೆ ನುಗ್ಗಿ ಸುಮಾರು 250 (2.5 ಟನ್) ಕಲ್ಲಂಗಡಿ ಹಣ್ಣುಗಳನ್ನು ಮನಸೋಇಚ್ಛೆ ಕಿತ್ತು ಕತ್ತರಿಸಿ ಪರಾರಿಯಾಗಿದ್ದಾರೆ.
ಗ್ರಾಮಾಂತರ ಠಾಣೆಗೆ ದೂರು ದಾಖಲಿಸಲಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಕೃತ್ಯಕ್ಕೆ ವೈಯಕ್ತಿಕ ದ್ವೇಷ ಕಾರಣವೆನ್ನಲಾಗಿದೆ. ಘಟನೆಯಲ್ಲಿ 4 ಮಂದಿ ಶಾಮೀಲಾಗಿರಬಹುದೆಂದು ದೂರುದಾರ ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಒಬ್ಬ ವ್ಯಕ್ತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆನ್ನಲಾಗಿದೆ.
ಗ್ರಾಮದ ಮುಖಂಡರಿಗೆ ವಿಷಯ ಗೊತ್ತಾಗಿ ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ, ಎಫ್‌ಐಆರ್ ದಾಖಲಿಸದೆ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿ, ದೂರುದಾರರಿಗೆ ಆಗಿರುವ ನಷ್ಟ ತುಂಬಿಸಿಕೊಡುವುದಾಗಿ ಭರವಸೆ ನೀಡಿದ್ದಾರೆನ್ನಲಾಗಿದೆ. ಇದಕ್ಕೆ ಒಪ್ಪದ ದೂರುದಾರ, ಬೆಳೆ ನಷ್ಟ ತುಂಬಿಕೊಡುವ ಜತೆಗೆ ಕೃತ್ಯದಲ್ಲಿ ಭಾಗಿಯಾಗಿರುವ ಜನರಿಂದ ಮುಂದೆ ತಮಗೆ ಯಾವುದೇ ತೊಂದರೆ ಉಂಟಾಗದಂತೆ ಮುಚ್ಚಳಿಕೆ ಬರೆಸಿಕೊಡಬೇಕು, ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಕೋರಿರುವುದರಿಂದ ತಪ್ಪಿತಸ್ಥರನ್ನು ಠಾಣೆಗೆ ಕರೆಸಲು ಪೊಲೀಸರು ಶೋಧನೆ ಮುಂದುವರಿಸಿದ್ದಾರೆ.