ಜಿಲ್ಲೆ

ದ್ವೇಷ-ಹಿಂಸೆ ತಡೆಗೆ ಬೇಕು ಬುದ್ಧನ ಪ್ರೀತಿ

ಬೀದರ್: ದ್ವೇಷ, ಅಸೂಯೆ, ಹಿಂಸೆ, ಅಸಮಾನತೆ ತಡೆಗೆ ಇಂದಿನ ಸಮಾಜಕ್ಕೆ ಬುದ್ಧನ ಪ್ರೀತಿ, ಕರುಣೆ ತತ್ವಗಳು ಬೇಕು ಎಂದು ಬೀದರ್ ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಪರಮೇಶ್ವರ ನಾಯಕ್ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಸಮುದಾಯ ಭನವದಲ್ಲಿ ಆಯೋಜಿಸಿದ್ದ ನವದೆಹಲಿ ವಿಶ್ವವಿದ್ಯಾಲಯದ ಡಾ.ಕೆ.ಪಿ. ವಾಸ್ನಿಕ್ ಅವರ ಬುದ್ಧ ಆನ್ ಹ್ಯಾಪಿನೆಸ್ ಆಂಗ್ಲ ಕೃತಿಯನ್ನು ಕನ್ನಡಕ್ಕೆ ತರ್ಜುಮೆಗೊಳಿಸಿರುವ ನಾರಾಯಣರಾವ್ ಕಾಂಬ್ಳೆ ಅವರ ಬುದ್ಧ ಜೀವನ ಮಾರ್ಗ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ದ್ವೇಷ, ಅಸೂಯೆಗಳನ್ನು ನಿರ್ನಾಮ ಮಾಡಿ ಸಮಾಜದಲ್ಲಿ ಪ್ರೀತಿಯ ಚಿಲುಮೆಯನ್ನು ಬುದ್ಧ ಉಕ್ಕಿಸಿದ ಎಂದರು.
ಬುದ್ಧ ಜೀವನ ಮಾರ್ಗ ಪುಸ್ತಕದಲ್ಲಿ ಸಿದ್ಧಾರ್ಥ ಬುದ್ಧನಾಗಿ ಬದಲಾದದ್ದು, ಬುದ್ಧನ ಮೊದಲ ಪ್ರವಚನ, ನಾಲ್ಕು ಆರ್ಯ ಸತ್ಯಗಳು,ಪಂಚಶೀಲ ಆರ್ಯ ಅಷ್ಠಾಂಗಿಕ ಮಾರ್ಗ, ಹತ್ತು ಪರಿಮಿತ, ಮಾಧ್ಯಮ ಮಾರ್ಗ, ಕಾರಣ ಮತ್ತು ಪರಿಣಾಮ ಸೇರಿ 14 ಅಧ್ಯಾಯದ 336 ಪುಟಗಳ ಮೌಲಿಕ ಕೃತಿ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಸಮಸಮಾಜ ನಿರ್ಮಾಣಕ್ಕೆ ಬುದ್ಧ, ಬಸವ, ಅಂಬೇಡ್ಕರ್ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ನಡೆಯಬೇಕು ಎಂದರು.
ಭಂತೆ ವರಜ್ಯೋತಿ ಸಾನ್ನಿಧ್ಯದಲ್ಲಿ ಹಿರಿಯ ಚಿಂತಕ ಡಾ.ತಾತ್ಯಾರಾವ್ ಕಾಂಬ್ಳೆ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ನಾರಾಯಣರಾವ್ ಕಾಂಬ್ಳೆ ಮಾತನಾಡಿದರು. ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ, ಪ್ರಮುಖರಾದ ಪಂಡಿತ ಚಿದ್ರಿ, ಡಾ.ಸುರೇಶ ಮುಳೆ, ಬಸವರಾಜ ಬುಕ್ಕಾ, ರಾಜಶೇಖರ ಮಂಗಲಗಿ, ಹಣಮಂತ ವಲ್ಲೇಪುರೆ, ಶಂಭುಲಿಂಗ ವಾಲ್ದೊಡ್ಡಿ, ಶಂಕರರಾವ್ ಸಿಂಧೆ, ಶಂಕರ ದೊಡ್ಡಿ, ಗೀತಾ ಚಿದ್ರಿ, ಪ್ರೇಮಲಾ ಡಾಂಗೆ, ಡಾ.ಪೃಥ್ವಿರಾಜ ಲಕ್ಕಿ, ಶಿವಾನಿ ಸ್ವಾಮಿ, ಶೇಷರಾವ್ ಬೆಳಕುಣಿ ಇತರರಿದ್ದರು.
ಬೆಂಗಳೂರಿನ ಶಿಕ್ಷಣ ಇಲಾಖೆ ಅಧಿಕಾರಿ ಡಾ.ಟಿ.ಆರ್. ದೊಡ್ಡೆ ಪ್ರಾಸ್ತಾವಿಕ ಮಾತನಾಡಿದರು. ರಾಜಪ್ಪ ಗುನ್ನಳ್ಳಿ ಸ್ವಾಗತಿಸಿದರು. ಸುಬ್ಬಣ್ಣ ಕರಕನಳ್ಳಿ ನಿರೂಪಣೆ ಮಾಡಿದರು. ಶರಣಬಸಪ್ಪ ಫುಲೆ ವಂದಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಹಿತ್ಯ ಪ್ರತಿಷ್ಠಾನ, ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಘಟಕ ಹಾಗೂ ಜೈಹಿಂದ್ ಹಿರಿಯ ನಾಗರಿಕರ ಸಂಘದ ಸಹಯೋಗದಡಿ ಕಾರ್ಯಕ್ರಮ ಸಂಘಟಿಸಲಾಗಿತ್ತು.