ಸಿಂದಗಿ ಶಾಸಕ ಅಶೋಕ ಮನಗೂಳಿ 
ಜಿಲ್ಲೆ

ದ್ವೇಷ ರಾಜಕಾರಣ ನನ್ನ ಹಿಸ್ಟರಿಯಲ್ಲಿಲ್ಲ

ಸಿಂದಗಿ: ಮಾಜಿ ಶಾಸಕ ರಮೇಶ ಭೂಸನೂರ ಅವರಿಗೆ ದ್ವೇಷ ಮತ್ತು ವಿರೋಧ ಎಂಬ ಪದಗಳ ಅರ್ಥವೇ ಗೊತ್ತಿಲ್ಲ. ರಾಜಕಾರಣಕ್ಕಾಗಿ ಆಧಾರ ರಹಿತ ಆರೋಪ ಮಾಡುವ ಬದಲು ದಾಖಲಾತಿಗಳೊಂದಿಗೆ ಸಾಬೀತುಪಡಿಸಲಿ ಎಂದು ಶಾಸಕ ಅಶೋಕ ಮನಗೂಳಿ ಸವಾಲು ಹಾಕಿದರು.

ಮಾಜಿ ಶಾಸಕರ ಆರೋಪಕ್ಕೆ ಸಂಬಂಧಿಸಿದಂತೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಸನೂರ ಅವರು ನನಗೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿರುವುದು ಸರಿಯಲ್ಲ. ದ್ವೇಷದ ರಾಜಕಾರಣ ನನ್ನ ಹಾಗೂ ನಮ್ಮ ಕುಟುಂಬದ ಹಿಸ್ಟರಿಯಲ್ಲಿಯೇ ಇಲ್ಲ. ನಿಗಮದ ನೇರ ಸಾಲ, ಆಶ್ರಯ ಮನೆಗಳ ಫಲಾನುಭವಿಗಳ ಆಯ್ಕೆಪಟ್ಟಿಯನ್ನು ರದ್ದುಪಡಿಸಿದ್ದಾರೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದೆ. ಬಿಜೆಪಿ ಕಾರ್ಯಕರ್ತ ಗೊರವಗುಂಡಗಿ ಯುವಕ ವಿಷ ಸೇವಿಸಿ ಅವನು ಹರಿಬಿಟ್ಟ ಸ್ಟೇಟಸ್ ಕುರಿತು ಮಾತನಾಡಿದ್ದಾರೆ. ಆದರೆ ಆ ವ್ಯಕ್ತಿ ಆ. 30ರಂದು ರಾತ್ರಿ 10.30ಕ್ಕೆ ವಿಷಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಮಧ್ಯರಾತ್ರಿ 3.13ಕ್ಕೆ ಸ್ಟೇಟಸ್ ಬಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಅಲ್ಲದೇ ಆತ ನೇರ ಸಾಲದ ಫಲಾನುಭವಿಯಾಗಿ ಆಯ್ಕೆಯಾಗಿದ್ದರಷ್ಟೇ ಅಲ್ಲವೇ ಅದನ್ನು ನಾನು ರದ್ದುಪಡಿಸಲು ಸಾಧ್ಯ. ಈ ವಿಷಯದಲ್ಲಿ ಮಾಜಿ ಶಾಸಕ ಭೂಸನೂರ ನಿಗಮದ ಸಾಲದ ವಿಚಾರವಾಗಿ ಬರೆದ ಪತ್ರದಲ್ಲಿ ದಿನಾಂಕ ನಮೂದಾಗಿರಲಿಲ್ಲ. ಈ ಪತ್ರ ಚುನಾವಣೆ ಪೂರ್ವದ್ದೋ ಅಥವಾ ನಂತರದ್ದೋ ಎಂಬ ವಿಚಾರದಲ್ಲಿ ನಿಗಮದ ಅಧಿಕಾರಿಗಳಲ್ಲಿ ಗೊಂದಲವಿತ್ತು. ಪಟ್ಟಣದ ಪ್ರವಾಸಿಮಂದಿರಕ್ಕೆ ಬಂದಿದ್ದ ನಿಗಮದ ಅಧಿಕಾರಿಗಳಿಗೆ ಈ ವಿಚಾರವಾಗಿ ಫಲಾನುಭವಿಗಳ ಪಟ್ಟಿ ಹಾಗೂ ಯೋಜನೆ ಕುರಿತ ವಿವರಗಳನ್ನು ಕೇಳಿದ್ದೆ. ಆದರೆ ನಾನು ಯಾರಿಗೂ ಸಾಲ ನೀಡದಂತೆ ತಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಪುರಸಭೆಯಡಿಯಲ್ಲಿನ ಆಶ್ರಯ ಮನೆಗಳ ವಿಚಾರವಾಗಿಯೂ ನಾನು ಯಾವುದನ್ನೂ ರದ್ದುಪಡಿಸಿಲ್ಲ ಎಂದ ಶಾಸಕರು, ಪುರಸಭೆ ಅಧಿಕಾರಿಗಳು ಫಲಾನುಭವಿಗಳ ಪಟ್ಟಿಯಲ್ಲಿ ಬಹುತೇಕರು ಅನರ್ಹರು ಎಂದು ಉಪವಿಭಾಗಾಧಿಕಾರಿಗೆ ತಿಳಿಸಿದ್ದರು. ಅಲ್ಲದೇ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕೆಲವು ಕಾಮಗಾರಿಗಳಿಗೆ ಅನುದಾನವೇ ಇಲ್ಲ. ಅವರು ಕೈಗೊಂಡ ಕಾಮಗಾರಿಗಳಲ್ಲೊಂದು ಉದಾಹರಣೆ ನೀಡುವುದಾದರೆ, 96ಲಕ್ಷದ ಕ್ರಿಯಾ ಯೋಜನೆಯಲ್ಲಿ 46 ಕಾಮಗಾರಿಗಳನ್ನು ನಿರ್ವಹಿಸಲಾದರೂ ಹೇಗೆ ಸಾಧ್ಯ? ಕೇವಲ 2 ಲಕ್ಷದಲ್ಲಿ ಸಮುದಾಯ ಭವನದ ಹೇಗೆ ಮಾಡಲಾದೀತು ? ಕನಿಷ್ಠ 5ರಿಂದ 6ಲಕ್ಷ ರೂಪಾಯಿ ಬೇಕು. ಅದಕ್ಕಾಗಿ ಚೇಂಜ್ ಆಫ್ ವರ್ಕ ಮಾಡಿಸಿ, ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಮಾಡಿರುವೆ. ಕ್ಷೇತ್ರ ಸೇರಿದಂತೆ ಪಟ್ಟಣದಲ್ಲಿ ನಿರ್ಮಾಣಗೊಳ್ಳಬೇಕಿರುವ 3.5ಕೋಟಿ ವೆಚ್ಚದ ಕನಕ ಭವನ ನಿರ್ಮಾಣ, ಹಂದಿಗನೂರ ಸಿದ್ರಾಮಪ್ಪ ಭವನ ಹಾಗೂ ಶಿಕ್ಷಕರ ಭವನದ ಕತೆಯೂ ಅದೇ. ಅನುದಾನ ರಹಿತವಾದ ಆದೇಶ ಪತ್ರ ಪ್ರದರ್ಶಿಸುವ ಮೂಲಕ ಕ್ಷುಲ್ಲಕ ರಾಜಕಾರಣ ಮಾಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬರ ಅಧ್ಯಯನ ನಡೆಯುತ್ತಿದೆ. ಆಲಮೇಲ-ಸಿಂದಗಿ ತಾಲೂಕುಗಳಿಗೆ ಬರ ಪರಿಹಾರವಾಗಿ ತಲಾ 5ಕೋಟಿ ರೂ. ಅನುದಾನ ಕೋರಿ ಮನವಿ ಮಾಡಿರುವೆ. ಬರ ಸಮೀಕ್ಷೆ ಪಟಿಯಲ್ಲಿಯೂ ಈ ತಾಲೂಕುಗಳಿವೆ ಎಂದು ಮಾಜಿ ಶಾಸಕ ಭೂಸನೂರ ಬರ ಘೋಷಣೆ ಒತ್ತಾಯಕ್ಕೆ ಉತ್ತರಿಸಿದರು.
ನಮ್ಮ ಸರ್ಕಾರದ ಗ್ಯಾರಂಟಿಗಳ ಬಗ್ಗೆ ವ್ಯಂಗ್ಯವಾಡಿರುವ ಭೂಸನೂರ, ಈ ಯೋಜನೆಗಳ ಲಾಭದ ಬಗ್ಗೆ ಟೀಕೆ ಮಾಡದೇ ಜನರ ಬಳಿ ಹೋಗಿ ಖಾತ್ರಿ ಮಾಡಿಕೊಳ್ಳಲಿ. ಅಲ್ಲದೇ ತಮ್ಮ ಹಿರಿತವನ್ನು ಟೀಕೆಗಳಿಗೆ ಸೀಮಿತಗೊಳಿಸದೇ ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಣ್ಣ ಸಾಲಿ, ಎಂ.ಎ. ಖತೀಬ, ಸುರೇಶ ಪೂಜಾರಿ, ರಾಜಶೇಖರ ಕೂಚಬಾಳ, ಮುಸ್ತಾಕ ಮುಲ್ಲಾ, ಮಡು ಸೊನ್ನದ, ಶಾಂತಪ್ಪ ರಾಣಾಗೋಳ, ಇರ್ಫಾನ್ ಭಾಗವಾನ ಮತ್ತಿತರರಿದ್ದರು.