ಚಿತ್ರದುರ್ಗ: ಲೋಕಸಭಾ ಚುನಾವಣೆ ಪ್ರಚಾರ ಸಂಬಂಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸುವಿಧಾ ತಂತ್ರಾಂಶದ ಮೂಲಕವೇ ಅನುಮತಿ ಪಡೆಯಬೇಕು. ಅದಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ವಿವಿಧ ಪಕ್ಷಗಳ ಪ್ರತಿನಿಧಿಗಳೊಂದಿಗೆ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿ, ಪ್ರಚಾರಕ್ಕೆ ಸಂಬಂಧಿಸಿದ ಎಲ್ಲವಕ್ಕೂ ಭೌತಿಕವಾಗಿ ಅರ್ಜಿ ಸಲ್ಲಿಸಲು ಯಾವುದೇ ಅವಕಾಶ ಇಲ್ಲ. ಪ್ರಚಾರ ಸಭೆ ಆಯೋಜನೆಗೂ 48 ಗಂಟೆ ಮುನ್ನ ಅರ್ಜಿ ಸಲ್ಲಿಸಿದರೆ, ಅನುಮತಿ ನೀಡಲು ಅನುಕೂಲವಾಗಲಿದೆ ಎಂದರು.
ಅರ್ಜಿ ಸಲ್ಲಿಸಿದವರಿಗೆ ಜೇಷ್ಠತೆ ಆಧಾರದಲ್ಲೇ ಅನುಮತಿ ದೊರೆಯಲಿದೆ. ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ಪೊಲೀಸ್, ಅಗ್ನಿಶಾಮಕ ಸೇರಿ ವಿವಿಧ ಇಲಾಖೆಗಳ ಅನುಮತಿಗಾಗಿ ಏಕಗವಾಕ್ಷಿ ವ್ಯವಸ್ಥೆ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಎಲೆಕ್ಟ್ರಾನಿಕ್ ಮಾಧ್ಯಮ ಮೂಲಕ ಬಿತ್ತರಿಸುವ ಜಾಹೀರಾತು ಸಂದೇಶ ವಿಷಯದ ಕುರಿತು ಮಾಧ್ಯಮ ಪ್ರಮಾಣೀಕರ ಸಮಿತಿಯ ಅನುಮೋದನೆ ಪಡೆಯಬೇಕು. ಅನ್ಯಧರ್ಮ, ಕೋಮು, ಜಾತಿ, ವ್ಯಕ್ತಿಗಳ ಬಗ್ಗೆ ದ್ವೇಷ ಭಾಷಣ ಮಾಡುವುದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲಂಘನೆಯಾಗಲಿದೆ. ಇಂತಹ ಪ್ರಕರಣ ಕಂಡುಬಂದರೆ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಖಾಸಗಿ ಮದುವೆಗಳಲ್ಲಿ ಜನಪ್ರತಿನಿಧಿಗಳು, ಅಭ್ಯರ್ಥಿಗಳು ಪಾಲ್ಗೊಳ್ಳಲು ಯಾವುದೇ ನಿರ್ಬಂಧವಿಲ್ಲ. ಆದರೆ, ಅಲ್ಲಿ ಚುನಾವಣೆ ಪ್ರಚಾರ ಮಾಡುವಂತಿಲ್ಲ. ಹಾಗೇನಾದರೂ ಮಾಡಿದಲ್ಲಿ ಇಡೀ ಮದುವೆಯ ಖರ್ಚು ಅಭ್ಯರ್ಥಿಯ ಚುನಾವಣೆ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು.
ಮಾ. 28ಕ್ಕೆ ಅಧಿಸೂಚನೆ, ಏ. 4 ನಾಮಪತ್ರ ಸಲ್ಲಿಸಲು ಕಡೆಯ ದಿನ, 5ರಂದು ನಾಮಪತ್ರ ಪರಿಶೀಲನೆ, 8ರಂದು ಹಿಂಪಡೆಯಲು ಕೊನೆಯ ದಿನವಾಗಿದೆ. ಆನಂತರ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿ ಘೋಷಿಸಲಾಗುವುದು ಎಂದರು.
ಹೊಸದಾಗಿ ಕಚೇರಿ ತೆರೆಯಲು ಅನುಮತಿ ಪಡೆಯಬೇಕು. ಮತಗಟ್ಟೆಗಳಿಗೆ ಪಕ್ಷದ ಏಜೆಂಟ್‌ಗಳ ನೇಮಕದಲ್ಲೂ ಯಾವ ಗೊಂದಲ ಉಂಟಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಕ್ಕಳ ಬಳಕೆ ನಿಷೇಧ: ಚುನಾವಣೆ ಪ್ರಚಾರಕ್ಕೆ ಮಕ್ಕಳ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಒಂದು ವೇಳೆ ಕಂಡುಬಂದರೆ ಬಾಲ ನ್ಯಾಯ ಕಾಯ್ದೆ ಹಾಗೂ ಜನಪ್ರತಿನಿಧಿಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಚುನಾವಣೆ ಅಕ್ರಮ ಹಾಗೂ ಉಚಿತ ಕೊಡುಗೆ ನೀಡುವ ಮಾಹಿತಿ ಇದ್ದರೆ ಸಿ-ವಿಜಿಲ್ ಅಥವಾ ಸಹಾಯವಾಣಿ ಸಂಖ್ಯೆ 1950 ಮೂಲಕ ದೂರು ನೀಡಬಹುದು ಎಂದು ಡಿಸಿ ಹೇಳಿದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್, ಚುನಾವಣಾ ತಹಸೀಲ್ದಾರ್ ಎಲ್.ಜಯಣ್ಣ, ವಿವಿಧ ಪಕ್ಷಗಳ ಪದಾಧಿಕಾರಿಗಳಾದ ಡಿ.ಗೋಪಾಲಸ್ವಾಮಿ ನಾಯಕ, ಡಿ.ಎನ್.ಮೈಲಾರಪ್ಪ, ಯಶವಂತ್ ಕುಮಾರ್, ಎಚ್.ನರೇಂದ್ರ, ಗೌಸ್‌ಪೀರ್, ಕೆ.ಇ.ಸತ್ಯಕೀರ್ತಿ, ಎನ್.ಪ್ರಕಾಶ್ ಇತರರಿದ್ದರು.