ಜಿಲ್ಲೆ

ದ್ವೇಷ ಭಾವನೆಗಳೇ ಯುದ್ಧಕ್ಕೆ ಕಾರಣ

ಹೊಳೆನರಸೀಪುರ: ಹಠಕ್ಕೆ ಬಿದ್ದಾಗ ಮಾತ್ರ ಯುದ್ಧ ನಡೆದು ಅಶಾಂತಿ ಉಂಟಾಗುತ್ತದೆ. ಪ್ರಪಂಚದಲ್ಲಿ ಅನೇಕ ಯುದ್ಧಗಳು ಹೆಣ್ಣು, ಹೊನ್ನು ಮತ್ತು ಮಣ್ಣಿಗಾಗಿಯೇ ನಡೆದಿವೆ. ಒಬ್ಬರ ನಡುವೆ ಮೊತ್ತೊಬ್ಬರಿಗೆ ವಿಶ್ವಾಸ ಚನ್ನಾಗಿದ್ದರೆ, ಯುದ್ಧಗಳು ನಡೆಯುವುದಿಲ್ಲ ಎಂದು ಇತಿಹಾಸ ಉಪನ್ಯಾಸಕ ಎಂ.ಸೋಮಣ್ಣ ಅಭಿಪ್ರಾಯಪಟ್ಟರು.


ತಾಲೂಕಿನ ದೊಡ್ಡಕಾಡನೂರಿನ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಜಿ-20 ಶೃಂಗಸಭೆಯ ಬಗ್ಗೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಮತ್ತು ಶಾಂತಿ ಸ್ಥಾಪನೆ ಎಂಬ ವಿಷಯ ಕುರಿತು ಮಂಗಳವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಪ್ರತಿಯೊಬ್ಬರೂ ಸಹೋದರರಂತೆ ಜೀವನ ನಡೆಸಬೇಕು. ದ್ವೇಷದ ಭಾವನೆಗಳೇ ಯುದ್ಧಕ್ಕೆ ಕಾರಣವಾಗುತ್ತವೆ. ಯುದ್ಧ ಅಂದರೆ, ಭಯ ಅಥವಾ ಸರ್ವನಾಶ ಎಂಬ ಅರ್ಥ ಬರುತ್ತದೆ. ಯಾವ ದೇಶ ಶಾಂತಿ ಬಯಸುತ್ತದೆಯೋ, ಆ ದೇಶ ಅಭಿವೃದ್ಧಿ ಹೊಂದುತ್ತದೆ. ಯುದ್ಧದಲ್ಲಿ ಒಂದು ದೇಶ ಗೆದ್ದೆ ಎಂದು ಖುಷಿಪಟ್ಟರೆ, ಮತ್ತೊಂದು ದೇಶ ಸೋತು ಸುಮ್ಮನಾಗಬಹುದು. ಆದರೇ ಆ ಯುದ್ಧದಲ್ಲಿ ಭಾಗವಹಿಸಿದ್ದ ಎರಡೂ ದೇಶಗಳ ಅಪಾರ ಸಂಖ್ಯೆಯ ಸೈನಿಕರು, ಅಧಿಕಾರಿಗಳು ಮತ್ತು ಸಾಮಾನ್ಯ ಜನರ ಬದುಕು ಸರ್ವನಾಶವಾಗಲಿದೆ. ಅಂತಹ ಕುಟುಂಬಕ್ಕೆ ಎಷ್ಟೇ ಪರಿಹಾರ ನೀಡಿದರೂ, ಅವರ ಬದುಕನ್ನು ಮತ್ತೆ ರೂಪಿಸಿಕೊಡಲು ಯಾವ ದೇಶದಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.


ಕಾಲೇಜಿನ ಪ್ರಾಂಶುಪಾಲ ಡಾ. ಚೌಡಯ್ಯ ಕಟ್ನವಾಡಿ ಮಾತನಾಡಿ, ವಿದ್ಯಾರ್ಥಿಯ ಜೀವನದಲ್ಲಿ ಉಂಟಾಗುವ ಸಣ್ಣ ಪುಟ್ಟ ಮನಸ್ತಾಪಗಳು ಮುಂದೊಂದು ದಿನ ದೊಡ್ಡ ಗಲಾಟೆಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಚಿಕ್ಕ ವಯಸ್ಸಿನಿಂದಲೇ ವಿದ್ಯಾರ್ಥಿಗಳು ಸಹೋದರತ್ವ ಬೆಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಪ್ರೌಢಶಾಲಾ ಮುಖ್ಯ ಶಿಕ್ಷಕಿ ಉಮಾಮಹೇಶ್ವರಿ, ದೈಹಿಕ ಶಿಕ್ಷಕ ನಂದೀಶ್, ಶಿಕ್ಷಕ ಸೋಮಶೇಖರ್, ಪದವಿಪೂರ್ವ ಕಾಲೇಜು ಮತ್ತು ಪ್ರೌಢಾಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.