ಜಿಲ್ಲೆ

ದ್ವಿಪಥದಿಂದ ದಶಪಥವಾಗುವತ್ತ ಬೈಪಾಸ್

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಬೈಪಾಸ್ ಅಗಲೀಕರಣದ ಮೊದಲ ಹಂತವಾಗಿ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಇನ್ನು 8 ತಿಂಗಳಲ್ಲಿ ಪ್ರಾರಂಭಗೊಳ್ಳಲಿದೆ. ನಗರದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ವಿನ್ಯಾಸ ರಚನೆಯ ಗುತ್ತಿಗೆದಾರರು ಹಾಗೂ ಬೈಪಾಸ್​ಗೆ ಹೊಂದಿಕೊಂಡ ಗ್ರಾಮಗಳ ಪ್ರಮುಖರ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅರವಿಂದ ಬೆಲ್ಲದ ಈ ವಿಷಯ ತಿಳಿಸಿದರು.

ದ್ವಿಪಥದ ಈ ಬೈಪಾಸ್ ಅನ್ನು 6 ಪಥಕ್ಕೆ ಏರಿಸುವ ಯೋಜನೆ ಇದೆ. ಇದರೊಂದಿಗೆ ಬೈಪಾಸ್​ನ ಎರಡೂ ಬದಿ ದ್ವಿಪಥದ ಸರ್ವಿಸ್ ರಸ್ತೆ ನಿರ್ವಿುಸಲಾಗುತ್ತದೆ. ಸರ್ವಿಸ್ ರಸ್ತೆ ಸೇರಿ ಈ ಬೈಪಾಸ್​ನಲ್ಲಿ ಒಟ್ಟು 10 ಪಥಗಳ ಮಾರ್ಗ ನಿರ್ವಣಗೊಳ್ಳಲಿದೆ ಎಂದು ಹೇಳಿದರು.

2024ರವರೆಗೆ ನಂದಿ ಇನ್​ಫ್ರಾಸ್ಟಕ್ಚರ್​ನವರಿಗೆ ಬೈಪಾಸ್ ನಿರ್ವಹಣೆಯ ಗುತ್ತಿಗೆ ಇದೆ. 2014ರಲ್ಲಿಯೇ ಬೈಪಾಸ್ ನಿರ್ವಹಣೆಯ ಗುತ್ತಿಗೆ ಮುಗಿದಿತ್ತು. ಆದರೆ ಅಂದಿನ ಕಾಂಗ್ರೆಸ್ ಸರ್ಕಾರ 2024ರವರೆಗೆ ಅವಧಿ ವಿಸ್ತರಿಸಿತ್ತು ಎಂದರು.

2024ರೊಳಗೆ ಸರ್ವಿಸ್ ರಸ್ತೆ ನಿರ್ಮಾಣ ಪೂರ್ಣಗೊಳಿಸಿ, ಅಲ್ಲಿ ವಾಹನಗಳ ಸಂಚಾರ ಸ್ಥಳಾಂತರಿಸಲಾಗುವುದು. ನಂತರ ಈ ಬೈಪಾಸ್ ಪಕ್ಕದಲ್ಲಿ ಇನ್ನುಳಿದ 4 ಪಥದ ರಸ್ತೆ ನಿರ್ವಿುಸಲಾಗುವುದು ಎಂದು ಹೇಳಿದರು.

ಕಳೆದ ಮಾರ್ಚ್​ನಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಲ್ಹಾದ ಜೋಶಿ ಅವರೊಂದಿಗೆ ನಡೆದ ಸಭೆಯಲ್ಲಿ ನಂದಿ ಇನ್​ಫ್ರಾಸ್ಟಕ್ಚರ್​ನವರು ಬೈಪಾಸ್ ಅನ್ನು ಷಟ್ಪಥಕ್ಕೆ ಏರಿಸುವ ಪ್ರಸ್ತಾಪಕ್ಕೆ ಒಪ್ಪಿದ್ದಾರೆ. ಆದರೆ, ಈಗಿನ ರಸ್ತೆ ಇಕ್ಕೆಲಗಳಲ್ಲಿ ಕಾಮಗಾರಿ ನಡೆಸುವಂತೆ ಸೂಚಿಸಿದ್ದಾರೆ. ಜ. 27ರಂದು ದೆಹಲಿಯಲ್ಲಿ ನಂದಿ ಇನ್​ಫ್ರಾಸ್ಟಕ್ಚರ್ ಅವರೊಂದಿಗೆ ನಡೆಯಲಿರುವ ಸಭೆಯಲ್ಲಿ ಈ ಕುರಿತ ಅಂತಿಮ ಒಪ್ಪಂದ ಸಿದ್ಧಗೊಳ್ಳಲಿದೆ ಎಂದು ತಿಳಿಸಿದರು.

ಷಟ್ಪಥ ರಸ್ತೆ ನಿರ್ವಣದ ವಿನ್ಯಾಸ ರಚಿಸುವ ಗುತ್ತಿಗೆ ಪಡೆದಿರುವ ಸಿ.ವಿ. ಕಂಡ್ ಕನ್ಸಲ್ಟನ್ಸಿ ಪ್ರೖೆ.ಲಿ. ನವರು ಬೈಪಾಸ್​ಗೆ ಹೊಂದಿಕೊಂಡಿರುವ ಗ್ರಾಮದ ಪ್ರಮುಖರು ನೀಡುವ ಸಲಹೆಗಳನ್ನು ಆಧರಿಸಿ, ಅಂತಿಮ ವಿನ್ಯಾಸ ಸಿದ್ಧಪಡಿಸಲಿದ್ದಾರೆ. ನಂತರ ಡಿಪಿಆರ್ ರಚಿಸಿ, ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ಮುಖ್ಯಸ್ಥ ಮಂಜುನಾಥ ಹೆಗಡೆ, ಗುತ್ತಿಗೆದಾರ ಸುನೀಲ ಕಂಡ್, ಬಿಜೆಪಿ ಮುಖಂಡರಾದ ಚಂದ್ರಶೇಖರ ಗೋಕಾಕ, ಪ್ರಭು ನವಲಗುಂದಮಠ, ರವಿ ನಾಯ್ಕ ಉಪಸ್ಥಿತರಿದ್ದರು.

ಪ್ರಮುಖ ಅಂಶಗಳು * ಬೈಪಾಸ್ ಎರಡೂ ಬದಿ ತಲಾ 30 ಕಿಮೀ ಉದ್ದದ ಹಾಗೂ 7 ಮೀಟರ್ ಅಗಲದ ದ್ವಿಪಥದ ಸರ್ವಿಸ್ ರಸ್ತೆ ನಿರ್ವಣಗೊಳ್ಳಲಿದೆ. *ಬೈಪಾಸ್ ಕೆಳಗೆ 21 ಕೆಳಸೇತುವೆ ನಿರ್ವಣ. ಇವುಗಳಲ್ಲಿ 5.5 ಮೀಟರ್ ಹಾಗೂ 4 ಮೀಟರ್ ಎತ್ತರ ಮತ್ತು 12 ಅಡಿ ಅಗಲದ ವಿವಿಧ ಕೆಳಸೇತುವೆ ಇರಲಿವೆ. *ಮೊದಲು ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬರುವ ಬೈಪಾಸ್​ನ ಎಡ ಭಾಗದಲ್ಲಿ ಸರ್ವಿಸ್ ರಸ್ತೆ ನಿರ್ವಣ. ** ಸರ್ವಿಸ್ ರಸ್ತೆ ಹಾಗೂ ಷಟ್ಪಥ ಬೈಪಾಸ್ ನಿರ್ವಣಕ್ಕೆ ಹೆಚ್ಚು ಭೂಮಿ ವಶಪಡಿಸಿಕೊಳ್ಳುವ ಅಗತ್ಯವಿಲ್ಲ. ಈಗಾಗಲೇ ರಾಜ್ಯ ಸರ್ಕಾರದ ಬಳಿ ಸಾಕಷ್ಟು ಭೂಮಿ ಇದೆ. *ಸರ್ವಿಸ್ ರಸ್ತೆಗೆ ಟೋಲ್ ಇರುವುದಿಲ್ಲ. ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುವವರು ಸರ್ವಿಸ್ ರಸ್ತೆಯಲ್ಲಿಯೇ ಸಂಚರಿಸಬಹುದು. *ಮುಂದಿನ ದಿನಗಳಲ್ಲಿ ಬೈಪಾಸ್​ನಲ್ಲಿ ಸಂಚರಿಸುವ ಸ್ಥಳೀಯರಿಗೆ ಟೋಲ್ ಶುಲ್ಕದಲ್ಲಿ ರಿಯಾಯಿತಿ ನೀಡಬೇಕೆಂಬ ಪ್ರಸ್ತಾವವೂ ಇದೆ. **ವಿಮಾನ ನಿಲ್ದಾಣಕ್ಕೆ ಬೈಪಾಸ್​ನಿಂದ ನೇರವಾಗಿ ಪ್ರತ್ಯೇಕ ರಸ್ತೆ ನಿರ್ವಿುಸುವ ಬೇಡಿಕೆ ಇದೆ.