ಜಿಲ್ಲೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವಿದ್ಯಾಮೃತ ಯೋಜನೆಯಡಿ ತರಬೇತಿ

ಹಾಸನ: ದ್ವಿತೀಯ ಪಿಯುಸಿ ಬಳಿಕ ವಿದ್ಯಾರ್ಥಿಗಳು ಎದುರಿಸುವ ಸಿಇಟಿ ಪರೀಕ್ಷೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾಮೃತ ಯೋಜನೆಯಡಿ ತರಬೇತಿ ನೀಡಲಾಗುತ್ತಿದ್ದು, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಸಂಸ್ಥೆಯ ವಿಕಸನ ಸಂಸ್ಥೆಯ ಉಸ್ತುವಾರಿ ಅಭಿರಾಮ್ ಅವರು ತಿಳಿಸಿದರು.
ಸಿಇಟಿ ಪರೀಕ್ಷೆಗೆ ಕೋಚಿಂಗ್ ಪಡೆಯಲು ಖಾಸಗಿ ಸಂಸ್ಥೆಗಳಲ್ಲಿ 10 ರಿಂದ 15 ಸಾವಿರ ರೂ. ಶುಲ್ಕ ಭರಿಸಬೇಕಾಗುತ್ತದೆ. ಆದರೆ ಬೆಂಗಳೂರಿನ ವಿಕಸನ ಸಂಸ್ಥೆಯು 9050 ರೂ.ಗಳನ್ನು ವಿದ್ಯಾರ್ಥಿ ವೇತನ ರೂಪದಲ್ಲಿ ನೀಡುತ್ತಿದ್ದು, ಮಕ್ಕಳು ಕೇವಲ 950 ರೂ. ಫಾವತಿಸಿದರೆ ಸಾಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಏ. 18 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಮಾ. 22ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಇದ್ದು ಆ ಬಳಿಕ ಹಾಸನದ ಆರ್‌ಸಿ ರಸ್ತೆಯಲ್ಲಿರುವ ಗಂಧದಕೋಠಿ ಬಾಲಕಿಯರ ಪದವಿಪೂರ್ವ ಕಾಲೇಜು ಹಾಗು ಹೊಳೆನರಸೀಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತರಬೇತಿ ನೀಡಲಾಗುವುದು. ಒಂದು ಕೇಂದ್ರದಲ್ಲಿ 100 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುವುದರಿಂದ ಗ್ರಾಮೀಣ ಹಾಗು ಬಡ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಒಟ್ಟು 10 ದಿನ ಆಫ್‌ಲೈನ್ ಮತ್ತು ಏ. 16ರ ವರೆಗೆ ಆನ್‌ಲೈನ್ ತರಗತಿ ನಡೆಸಲಾಗುವುದು. ಸಿಇಟಿ ಬಳಿಕ ವಿದ್ಯಾರ್ಥಿಗಳು ಏನು ಮಾಡಬೇಕೆಂಬುದರ ಕುರಿತಾಗಿಯೂ ಪಾಠ ಮಾಡಲಾಗುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಮಾಹಿತಿಗೆ 9035548499ಗೆ ಸಂಪರ್ಕಿಸಬಹುದು ಎಂದರು. ಉಪನ್ಯಾಸಕಿ ಮಾಧುರಿ ಇದ್ದರು.