ಗದಗ: ಜೂ.18ರಂದು ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಜರುಗಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕರೊನಾ ಹಾವಳಿ ಹಿನ್ನೆಲೆಯಲ್ಲಿ ಅತ್ಯಂತ ಸುರಕ್ಷಿತ ವಾಗಿ ಪರೀಕ್ಷೆ ನಡೆಸಲು ಜಿಲ್ಲಾಡಳಿತ ವಿಶೇಷ ಮುತುವರ್ಜಿ ವಹಿಸಿದೆ. ಎಲ್ಲ ಪರೀಕ್ಷಾ ಕೇಂದ್ರಗಳ ಸ್ವಚ್ಛತೆ ಕಾರ್ಯವನ್ನೂ ಪೂರ್ಣಗೊಳಿಸಿದೆ. ಕೊಠಡಿಗಳಿಗೆ ಸ್ಯಾನಿಟೈಸರ್ ಸಿಂಪಡಿಸುವ ಕಾರ್ಯವೂ ಭರದಿಂದ ಸಾಗಿದೆ.
ಗದಗ-ಬೆಟಗೇರಿಯಲ್ಲಿ 8, ರೋಣ 2, ಗಜೇಂದ್ರಗಡ 2, ಲಕ್ಷೆ್ಮೕಶ್ವರ 1, ಶಿರಹಟ್ಟಿ 1, ನರಗುಂದ 2, ನರೇಗಲ್ 1, ಮುಂಡರಗಿ 2 ಸೇರಿ ಜಿಲ್ಲೆಯಲ್ಲಿ ಒಟ್ಟು 19 ಪರೀಕ್ಷಾ ಕೇಂದ್ರಗಳಿವೆ. ಜಿಲ್ಲೆಯಲ್ಲಿ ಒಟ್ಟು 11,081 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ಹೊರ ಜಿಲ್ಲೆಯ 534 ಹಾಗೂ ಹೊರರಾಜ್ಯದ (ಆಂಧ್ರ ಪ್ರದೇಶ) ಒಬ್ಬ ವಿದ್ಯಾರ್ಥಿ ಇದ್ದಾರೆ.
ಜಿಲ್ಲೆಯ 19 ಪರೀಕ್ಷೆ ಕೇಂದ್ರಗಳಲ್ಲಿ 701 ಕೊಠಡಿಗಳನ್ನು ಗುರುತಿಸಲಾಗಿದ್ದು, ಎಲ್ಲವನ್ನೂ ಸ್ಯಾನಿಟೈಸ್ ಮಾಡಲಾಗುತ್ತಿದೆ. ಒಂದು ಕೊಠಡಿಯಲ್ಲಿ 24 ಆಸನ ವ್ಯವಸ್ಥೆ ಮಾಡಲಾಗಿದ್ದು, ದೈಹಿಕ ಅಂತರ ಕಾಯ್ದುಕೊಳ್ಳಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಪರೀಕ್ಷಾ ಕೇಂದ್ರದವರೇ ಮಾಸ್ಕ್ ನೀಡಲು ಸೂಚನೆ ನೀಡಲಾಗಿದೆ. ದಾನಿಗಳಿಂದಲೂ ಮಾಸ್ಕ್ ಪಡೆಯಬಹುದು. ಅಲ್ಲದೆ, ಆರೋಗ್ಯ ಇಲಾಖೆಯಿಂದ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಜ್ವರ ಇರುವಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕು. ವಿದ್ಯಾರ್ಥಿಗಳನ್ನು ನಿಗದಿತ ಸಮಯಕ್ಕೆ ಕರೆದುಕೊಂಡು ಬರಲು ಆಯಾ ಕಾಲೇಜ್ನ ಪ್ರಾಚಾರ್ಯ ಹಾಗೂ ಉಪನ್ಯಾಸಕರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ವೈದ್ಯಾಧಿಕಾರಿ ಮತ್ತು ನರ್ಸ್ ಸೇರಿ ಇತರೆ ಸಿಬ್ಬಂದಿ ನಿಯೋಜನೆ ಮಾಡಬೇಕು. ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ಇಂಗ್ಲಿಷ್ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಪ.ಪೂ. ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿವರಿಸಿದರು.
ಉಚಿತ ಬಸ್ ಸೌಲಭ್ಯ: ಪರೀಕ್ಷೆ ಬರೆಯಲು ಅನುಕೂಲವಾಗಲೆಂದು ವಿದ್ಯಾರ್ಥಿಗಳಿಗೆ ಉಚಿತ ಬಸ್ ಸಂಚಾರ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯ 80 ಗ್ರಾಮಗಳ ವಸತಿ ಬಸ್ಗಳು ಗುರುವಾರ ಸಂಚರಿಸಲಿವೆ. ಯಾವುದೇ ವಿದ್ಯಾರ್ಥಿಗಳಿಗೂ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಈಗಾಗಲೇ ಡಿಡಿಪಿಯು ಅವರೊಂದಿಗೆ ರ್ಚಚಿಸಲಾಗಿದೆ ಎಂದು ಕೆಎಸ್ಆರ್ಟಿಸಿ ನಿಯಂತ್ರಣಾಧಿಕಾರಿ ಎಫ್.ಸಿ. ಹಿರೇಮಠ ಹೇಳಿದರು.
ಗುರುವಾರ ನಡೆಯಲಿರುವ ಇಂಗ್ಲಿಷ್ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಪರೀಕ್ಷೆಗಳ ಕೊಠಡಿಗಳನ್ನು ಸ್ವಚ್ಛಗೊಳಿಸಲಾಗಿದ್ದು, ಸ್ಯಾನಿಟೈಸರ್ ಸಹ ಸಿಂಪಡಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು ಕಡ್ಡಾಯ. ಅಲ್ಲದೆ, ಜಿಲ್ಲೆಯಲ್ಲಿರುವ ಹೊರ ರಾಜ್ಯದ ವಿದ್ಯಾರ್ಥಿಗಳು ನಮ್ಮ ಜಿಲ್ಲೆಯಲ್ಲಾದರೂ ಪರೀಕ್ಷೆ ಬರೆಯಬಹುದು, ತಮ್ಮೂರಿನಲ್ಲಾದರೂ ಪರೀಕ್ಷೆ ಬರೆಯಬಹುದು. ಪರೀಕ್ಷೆ ಬರೆಯುವ ವಿದ್ಯಾರ್ಥಿಯೇ ಈ ಕುರಿತು ಆಯ್ಕೆ ಮಾಡಿಕೊಳ್ಳಬೇಕು. | ಎಚ್.ಎಸ್. ರಾಜೂರ ಡಿಡಿಪಿಯು