ಜಿಲ್ಲೆ

ದ್ವಿಚಕ್ರವಾಹನ ಕದಿಯುತ್ತಿದ್ದ ಐವರ ಬಂಧನ, ಖಾಸಗಿ ಬೇಹುಗಾರಿಕಾ ಸಂಸ್ಥೆಯ ನೌಕರನೂ ಕೃತ್ಯದಲ್ಲಿ ಭಾಗಿ

ನೆಲಮಂಗಲ: ದ್ವಿಚಕ್ರವಾಹನ ಕದ್ದು ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಐವರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿರುವುದಾಗಿ ಕೇಂದ್ರ ವಲಯ ಪೊಲೀಸ್ ಮಹಾನಿರ್ದೇಶಕ ಎಂ.ಚಂದ್ರಶೇಖರ್ ಹೇಳಿದರು.

ಬೆಂಗಳೂರು ದಕ್ಷಿಣ ತಾಲೂಕು ಯಶವಂತಪುರ ಹೋಬಳಿ ಹೊನಗನಹಳ್ಳಿಯ ರವಿಕುಮಾರ್ (21), ಕೆಂಪೇಗೌಡನಗರದ ಮುನಿರಾಜು (20), ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಭೀಮನಹಳ್ಳಿ ಜಗದೀಶ್ (21), ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಬೆಟ್ಟಹಳ್ಳಿಯ ಮೋಹನ್‌ಕುಮಾರ್ (22), ಹೊಸಹಳ್ಳಿಯ ಶಿವಶಂಕರ್ (25) ಬಂಧಿತರು.

ಹೊಸಹಳ್ಳಿಯ ಶಿವಶಂಕರ್ ಬೆಂಗಳೂರಿನ ಖಾಸಗಿ ಬೇಹುಗಾರಿಕಾ ಸಂಸ್ಥೆಯ ನೌಕರನಾಗಿದ್ದಾನೆ. ಇವರಿಂದ 40 ಲಕ್ಷ ರೂ. ಮೌಲ್ಯದ 46 ದ್ವಿಚಕ್ರ ವಾಹನ ಮತ್ತು ಮಾರಕಾಸಗಳನ್ನು ವಶಪಡಿಸಿಕೊಂಡಿರುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನ ಡಿಕನ್‌ಸನ್ ರಸ್ತೆಯಲ್ಲಿರುವ ಖಾಸಗಿ ಬೇಹುಗಾರಿಕಾ ಸಂಸ್ಥೆಯ ಸಹೋದ್ಯೋಗಿ ಲಿಖಿತ್ ಎಂಬಾತನ ಮೂಲಕ ರವಿಕುಮಾರ್, ಶಿವಶಂಕರ್‌ಗೆ ಪರಿಚಯವಾಗಿದ್ದ. ಸಂಸ್ಥೆಯ ಕಾರ್ಯನಿರ್ವಹಣೆಗೆ ನಂಬರ್ ಪ್ಲೇಟ್‌ಗಳಿಲ್ಲದ ವಿವಿಧ ದ್ವಿಚಕ್ರವಾಹನ ಬೇಕು ಎಂದು ರವಿಕುಮಾರ್‌ಗೆ ಶಿವಶಂಕರ್ ತಿಳಿಸಿದ್ದ. ಅದರಂತೆ ಶಿವಶಂಕರ್ ಬೈಕ್ ೆಟೋ ತೆಗೆದು ಲೊಕೇಷನ್ ಸಮೇತ ಕಳುಹಿಸುತ್ತಿದ್ದ. ನಂತರ ರವಿಕುಮಾರ್ ಸ್ನೇಹಿತ ಮುನಿರಾಜು, ಮೋಹನ್‌ಕುಮಾರ್ ಜತೆಗೂಡಿ ರಾತ್ರಿವೇಳೆ ವಾಹನಗಳನ್ನು ಕಳವು ಮಾಡುತ್ತಿದ್ದ.

ಸಿಸಿ ಕ್ಯಾಮರಾ ನೀಡಿದ ಸುಳಿವು: ರವಿಕುಮಾರ್ ಮತ್ತು ಜಗದೀಶ್ ಸಣ್ಣ ವಯಸ್ಸಿನಿಂದಲೂ ಅಪರಾಧ ಕೃತ್ಯ ಎಸಗುತ್ತಿದ್ದರು. ಬಾಲಕರಾಗಿ 2020ರಲ್ಲಿ ದರೋಡೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರವಿಕುಮಾರ್ ಸಾಕಷ್ಟು ದಿನದಿಂದ ಆಂಬುಲೆನ್ಸ್ ಖರೀದಿಸುವ ಆಸೆ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಆತ ಸ್ನೇಹಿತರ ಜತೆಗೂಡಿ ದ್ವಿಚಕ್ರವಾಹನ ಕಳವಿಗೆ ಕೈಹಾಕಿದ್ದ. ಕದ್ದ ವಾಹನಗಳನ್ನು ಶಿವಕುಮಾರ್ ಮತ್ತು ಗ್ಯಾರೇಜ್ ಮಾಲೀಕ ಮೋಹನ್‌ಗೆ ಕೊಡುತ್ತಿದ್ದ. ಅವರು ಕೊಡುತ್ತಿದ್ದ ಹಣದಿಂದ ಐಷಾರಾಮಿ ಜೀವನ ನಡೆಸಲಾರಂಭಿಸಿದ್ದ ಎಂಬುದು ವಿಚಾರಣೆಯಲ್ಲಿ ತಿಳಿದಿದ್ದಾಗಿ ಐಜಿಪಿ ಎಂ. ಚಂದ್ರಶೇಖರ್ ಮಾಹಿತಿ ನೀಡಿದರು.

ದ್ವಿಚಕ್ರವಾಹನ ಕಳ್ಳತನ ನಡೆದ ಪ್ರದೇಶದ ಮನೆಗಳು, ಕಾರ್ಖಾನೆ ಸೇರಿ ವಿವಿಧ ಅಂಗಡಿಗಳ ಸಿಸಿ ಕ್ಯಾಮರಾ ದೃಶ್ಯಗಳನ್ನು ಸಂಗ್ರಹಿಸಿದ್ದ ಪೊಲೀಸರು, ಅವುಗಳಲ್ಲಿ ಸಿಕ್ಕ ಸುಳಿವಿನ ಜತೆಗೆ ಆರೋಪಿಗಳ ಮೊಬೈಲ್‌ೆನ್‌ಗಳ ನೆಟ್‌ವರ್ಕ್ ಆಧರಿಸಿ ಬಂಧಿಸಿದ್ದಾರೆ.

ಬಂಧಿತರು 2 ವರ್ಷಗಳಿಂದ ದ್ವಿಚಕ್ರವಾಹನ ಕಳವು ಮಾಡುತ್ತಿದ್ದರು. ಬ್ಯಾಂಕ್, ಅಂಗಡಿ, ಸರ್ಕಾರಿ ಕಚೇರಿ ಹಾಗೂ ಮನೆಯ ಮುಂದೆ ನಿಲ್ಲಿಸಿದ್ದ ವಾಹನ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದರು. ಜಿಲ್ಲೆಯಲ್ಲಿ 10, ರಾಮನಗರ ಜಿಲ್ಲೆಯಲ್ಲಿ 5, ಬೆಂಗಳೂರು ನಗರದಲ್ಲಿ 2 ಬೈಕ್ ಕಳವಿನಲ್ಲಿ ಈ ತಂಡ ಭಾಗಿಯಾಗಿತ್ತು ಎಂದು ಐಜಿಪಿ ಹೇಳಿದರು.

ತಲಾ 50 ಸಾವಿರ ರೂ. ಬಹುಮಾನ: ಕಳ್ಳರ ಪತ್ತೆಗಾಗಿ ಎಸ್‌ಪಿ ಡಾ.ಕೆ.ಕೋನ ವಂಶಿಕೃಷ್ಣ ಅವರು ಅಪರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್, ಡಿವೈಎಸ್‌ಪಿ ಜಗದೀಶ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಬಿ.ಎಸ್.ಮಂಜುನಾಥ್ ನೇತೃತ್ವದಲ್ಲಿ ಎಸ್‌ಐ ದಾಳೇಗೌಡ, ಪೇದೆಗಳಾದ ನಾರಾಯಣಸ್ವಾಮಿ, ಮಲ್ಲಗೊಂಡಿ, ಪರ್ವೀಜ್ ಪಾಷಾ, ಗಂಗಾಧರ್, ಇಮ್ರಾನ್‌ಖಾನ್, ಸಿಬ್ಬಂದಿ ಲಕ್ಷ್ಮಣ್, ರವಿಕುಮಾರ್ ಒಳಗೊಂಡಂತೆ ವಿಶೇಷ ತಂಡ ರಚಿಸಿದ್ದರು. ತಂಡದ ಎಲ್ಲ ಸದಸ್ಯರಿಗೂ ಐಜಿಪಿ ಎಂ. ಚಂದ್ರಶೇಖರ್ ತಲಾ 50 ಸಾವಿರ ರೂ. ಬಹುಮಾನ ೋಷಿಸಿದರು.

ಅಪರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್, ಡಿವೈಎಸ್‌ಪಿ ಜಗದೀಶ್, ಸಿಪಿಐ ಬಿ.ಎಸ್.ಮಂಜುನಾಥ್, ಎ.ವಿ. ಕುಮಾರ್, ಎಚ್.ಆರ್.ಹರೀಶ್, ಅರುಣ್, ಎಸ್‌ಐ ಡಿ.ದಾಳೇಗೌಡ, ಎಚ್.ಟಿ. ವಸಂತ್, ಎನ್.ಸುರೇಶ್, ಡಿ.ಆರ್. ಮಂಜುನಾಥ್, ಚಿಕ್ಕನರಸಿಂಹಯ್ಯ, ಪುಟ್ಟಸ್ವಾಮಿ, ವಿ. ಅಂಜನ್‌ಕುಮಾರ್, ಠಾಣಾ ಸಿಬ್ಬಂದಿ ಮಲ್ಲಯ್ಯ ಬಾಗೇವಾಡಿ, ಉಮೇಶ್, ಶ್ರೀನಿವಾಸ್, ಆನಂದ್ ಮತ್ತಿತರರು ಇದ್ದರು.

ನಗರ ಸಂಚಾರ ಠಾಣೆಯಲ್ಲಿ ಸಿಬ್ಬಂದಿ ಕೊರತೆಯಿದೆ. ರಾ.ಹೆದ್ದಾರಿ ಹಾಗೂ ನಗರದ ಮುಖ್ಯರಸ್ತೆಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ, ಶೀಘ್ರದಲ್ಲೇ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಹಾಗೂ ಆಯ್ದ ಪ್ರದೇಶಗಳಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮರಾಗಳನ್ನು ಅಳವಡಿಸಿ, ಸಂಚಾರಿ ನಿಯಮ ಉಲ್ಲಂಘನೆ ತಡೆಗಟ್ಟಲಾಗುವುದು. ಎಂ.ಚಂದ್ರಶೇಖರ್, ಕೇಂದ್ರ ವಲಯ ಐಜಿಪಿ