ಬೆಂಗಳೂರು: ದ್ವಿಚಕ್ರ ವಾಹನ ಮತ್ತು ಮನೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ದೊಡ್ಡ ನಾಗಮಂಗಲದ ಅರ್ಜುನ್(೨೭) ಬಂಧಿತ. ಆರೋಪಿಯಿಂದ ಸುಮಾರು ೨ ಲಕ್ಷ ರು. ಮೌಲ್ಯದ ಐದು ಗ್ರಾಂ ಚಿನ್ನಾಭರಣ, ೧೬೦ ಗ್ರಾಂ ಬೆಳ್ಳಿ ಸಾಮಾನುಗಳು, ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ತಲಘಟ್ಟಪುರ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ಬಸವನಗುಡಿ, ತಿಲಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧಕೃತ್ಯ ಎಸಗಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಬಳಿಕವೂ ತನ್ನ ದುಷ್ಕೃತ್ಯಗಳನ್ನು ಮುಂದುವರೆಸಿದ್ದ. ಆರೋಪಿಯ ಬಂಧನದಿಂದ ಬನ್ನೇರುಘಟ್ಟ, ತಲಘಟ್ಟಪುರ ವ್ಯಾಪ್ತಿಯಲ್ಲಿ ನಡೆದ ತಲಾ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣ ಹಾಗೂ ಒಂದು ಮನೆಗಳವು ಪ್ರಕರಣ ಪತ್ತೆಯಾಗಿದೆ. ಆರೋಪಿಯು ಮೋಜು ಮಾಡಲು ಮನೆ ಮುಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ. ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ. ಕದ್ದ ಮಾಲುಗಳನ್ನು ಪರಿಚಿತರ ಮೂಲಕ ಮಾರಾಟ ಮಾಡಿ ಬಂದ ಹಣದಿಂದ ಮೋಜು ಮಾಡುತ್ತಿದ್ದನು. ಹಣ ಖಾಲಿಯಾದಾಗ ಮತ್ತೆ ಕಳ್ಳತನಕ್ಕೆ ಇಳಿಯುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.