ಜಿಲ್ಲೆ

ದ್ವಿ ಭಾಷಾ ಶಿಕ್ಷಣ ನೀತಿ ತ್ವರಿತ ಜಾರಿಯಾಗಲಿ

ಹುಣಸೂರು: ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹಾಗೂ ರಾಜ್ಯದ ಭಾಷಾ ಗೌರವ ಕಾಪಾಡಲು ದ್ವಿ ಭಾಷಾ ಶಿಕ್ಷಣ ನೀತಿಯನ್ನು ತ್ವರಿತವಾಗಿ ಜಾರಿಗೆ ತರಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ(ಎಚ್.ಶಿವರಾಮೇಗೌಡ ಬಣ)ಯ ಸದಸ್ಯರು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶನಿವಾರ ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಂತರ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಪುರುಷೋತ್ತಮ್, ಶಿಕ್ಷಣದಲ್ಲಿ ದ್ವಿಭಾಷಾ ನೀತಿಯ ಅನುಷ್ಠಾನ ಬಹುಮುಖ್ಯ. ಭಾಷಾ ಸಮತೋಲನಕ್ಕಾಗಿ ಕನ್ನಡವನ್ನು ಮೊಟ್ಟಮೊದಲು ಉಳಿಸಿಕೊಳ್ಳಬೇಕು ಎಂದರು.

ಹಲವು ಮುಂದುವರಿದ ರಾಷ್ಟ್ರಗಳು ದ್ವಿಭಾಷಾ ಶಿಕ್ಷಣವನ್ನಷ್ಟೇ ಉತ್ತೇಜಿಸುತ್ತಿವೆ. ಆಂಗ್ಲಭಾಷೆ ಮಕ್ಕಳ ವಿದ್ಯಾಭ್ಯಾಸದ ಮಟ್ಟವನ್ನು ಜಾಗತಿಕವಾಗಿ ಬಲಪಡಿಸುತ್ತಿವೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಕನ್ನಡವನ್ನು ಎಲ್ಲ ಶಾಲೆಗಳಲ್ಲೂ (ಸರ್ಕಾರಿ ಮತ್ತು ಖಾಸಗಿ) ಕಡ್ಡಾಯ ಭಾಷೆಯಾಗಿ ಕಲಿಸಲು ಕ್ರಮವಹಿಸಬೇಕು. ದ್ವಿಭಾಷಾ ನೀತಿಯ ಬಗ್ಗೆ ಸ್ಪಷ್ಟ ನೀತಿ, ನಿರ್ಧಾರ ಮತ್ತು ಅನುಷ್ಠಾನ ಚಟುವಟಿಕೆಗಳ ಪಟ್ಟಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಕರವೇ ಉಪಾಧ್ಯಕ್ಷ ಬಲರಾಮ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಖಜಾಂಚಿ ರಮೇಶ್, ಕಾರ್ಮಿಕ ಘಟಕದ ಅಧ್ಯಕ್ಷ ರಫಿ ಅಹಮದ್, ಶ್ರೀನಿವಾಸ್, ಸಂಜೀವಕುಮಾರ್, ನಾಗರಾಜ್, ಸತೀಶ್ ಇದ್ದರು.