ಹಳೇಬೀಡು: ದ್ವಾರಸಮುದ್ರ ಕೆರೆಯ ಪರಿಸರವನ್ನು ಸ್ವಚ್ಛವಾಗಿಡಲು ಶಾಶ್ವತ ಕ್ರಮಗಳನ್ನು ಶೀಘ್ರದಲ್ಲಿ ಕೈಗೊಂಡು, ವೀಕ್ಷಣೆಗೆ ಬರುವ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
ವಾಡಿಕೆಗೂ ಮೊದಲೇ ಕೋಡಿಬಿದ್ದು ಹರಿಯುತ್ತಿರುವ ದ್ವಾರಸಮುದ್ರ ಕೆರೆಗೆ ಬುಧವಾರ ಪುಷ್ಪಗಿರಿ ಶ್ರೀಗಳ ಸಾನ್ನಿಧ್ಯದಲ್ಲಿ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದರು.
ಶಾಸಕನಾಗುವುದಕ್ಕೂ ಮೊದಲು ಈ ಭಾಗದ ರೈತರು ಹಾಗೂ ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲವಾಗಿ ನಿಂತು ಶಾಶ್ವತ ನೀರಾವರಿಗೆ ಆಗ್ರಹಿಸಿದ್ದೆ. ಪ್ರಸ್ತುತ ಮಳೆರಾಯನ ಕೃಪೆಯಿಂದ ಸತತವಾಗಿ ಕೆರೆಯು ತುಂಬುತ್ತಿದ್ದು, ಚಾಲ್ತಿಯಲ್ಲಿರುವ ನೀರಾವರಿ ಯೋಜನೆಗಳು ಪೂರ್ಣಗೊಂಡರೆ ಕೆರೆಯಲ್ಲಿ ಸದಾಕಾಲ ನೀರು ತುಂಬಿ ಹರಿಯುವುದು ನಿಶ್ಚಿತ. ಕಾಮಗಾರಿಗಳನ್ನು ತ್ವರಿತವಾಗಿ ಮುನ್ನಡೆಸಿ ಮುಗಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ.
ರಣಘಟ್ಟ ಕಾಲುವೆ ಕೆಲಸ ಸ್ವಲ್ಪ ಬಾಕಿ ಇದ್ದು, ಜಮೀನು ವಶಪಡಿಸಿಕೊಳ್ಳುವ ವಿಷಯದಲ್ಲಿ ಸಣ್ಣ ಸಮಸ್ಯೆಯಾಗಿದೆ. ಅದನ್ನು ಕೂಡಲೇ ಬಗೆಹರಿಸಲಾಗುವುದು, ಜತೆಗೆ ಕೆರೆಯ ಪರಿಸರವನ್ನು ಗುಜರಾತಿನ ಸರ್ದಾರ್ ಸರೋವರದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ ಕಾರ್ಯಗತಗೊಳಿಲಾಗುವುದು ಎಂದರು.
ಸಾನ್ನಿಧ್ಯ ವಹಿಸಿದ್ದ ಪುಷ್ಪಗಿರಿ ಮಠದ ಶ್ರೀಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸುರೇಶ್ ಅವರು ಶಾಸಕರಾದ ಬಳಿಕ ಹೋಬಳಿಯ ಎಲ್ಲ ಕೆರೆಗಳೂ ಸತತವಾಗಿ ತುಂಬಿ ಹರಿಯುತ್ತಿವೆ. ಮಳೆರಾಯನ ಕೃಪೆಯೂ ಚೆನ್ನಾಗಿದ್ದು ರೈತರು ಸಂತಸದಲ್ಲಿದ್ದಾರೆ. ಹೋಬಳಿಯ ಜತೆಗೆ ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ಕೆರೆಗಳಿಗೂ ದ್ವಾರಸಮುದ್ರ ಕೆರೆಯಿಂದ ಹೊರ ಹೋಗುವ ನೀರು ವರದಾನವಾಗುತ್ತಿದೆ. ಹಾಗಾಗಿ ಶೀಘ್ರದಲ್ಲಿ ರಣಘಟ್ಟ ಕಾಲುವೆ ಕಾಮಗಾರಿಯನ್ನು ಮುಗಿಸಿ ಅದರಲ್ಲಿ ಯಗಚಿ ನದಿಯ ನೀರನ್ನು ಹರಿಸಬೇಕು. ದ್ವಾರಸಮುದ್ರ ಕೆರೆಯ ಪರಿಸರದಲ್ಲಿ ಸುಂದರ ಉದ್ಯಾನವನ ನಿರ್ಮಿಸಿ, ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಜನರು ಬರುವ ವಾತಾವರಣ ಸೃಷ್ಟಿಸಬೇಕು, ಜತೆಗೆ ಒಂದಷ್ಟು ಹೊತ್ತು ಕೂರಲು ಆಸನಗಳ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುಕುಮಾರ್ ಮಾತನಾಡಿ, ಕೆರೆಯ ಸುತ್ತಲಿನ ಸೌಂದರ್ಯವರ್ಧನೆಗೆ ಪಂಚಾಯಿತಿ ವತಿಯಿಂದ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಚಿದಾನಂದ, ಪಿಡಿಒ ವಿರೂಪಾಕ್ಷ, ಗ್ರಾಪಂ ಸದಸ್ಯರಾದ ಮಲ್ಲೇಶಪ್ಪ, ರಮೇಶ್, ರಶ್ಮಿ ವಿನಯ್, ಮುಖಂಡರಾದ ಸ್ವಾಮಿಗೌಡ, ಪ್ರಸನ್ನ ಮತ್ತಿತರರಿದ್ದರು.