ತೆಲಸಂಗ: ದ್ರಾಕ್ಷಿ ಬೆಳೆಗೆ ಕೀಟಗಳ ಉಪಟಳ ಹೆಚ್ಚಾಗಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ. ದಾವನಿ ರೋಗ ಹಾಗೂ ಕಾಂಡ ಕೊರೆಯುವ ಕೀಟಗಳು ದ್ರಾಕ್ಷಿ ಬೆಳೆಯನ್ನು ಹಾನಿ ಮಾಡುತ್ತಿವೆ.
ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಿಂದಾಗಿಯೂ ಬೆಳೆಗೆ ರೋಗ ತಗುಲುತ್ತಿದೆ. ಅಥಣಿ ತಾಲೂಕಿನ ಒಟ್ಟು 5 ಸಾವಿರ ಹೆಕ್ಟೇರ್ ದ್ರಾಕ್ಷಿ ಬೆಳೆಯಲಾಗಿದೆ. ಅದರಲ್ಲಿ ತೆಲಸಂಗ ಬಾಗದಲ್ಲಿಯೇ 4 ಸಾವಿರ ಹೆಕ್ಟೇರ್‌ಬೆಳೆಯಲಾಗಿದೆ. ತೆಲಸಂಗ, ಕನ್ನಾಳ, ಬನ್ನೂರ, ಅಥಣಿ ಪೂರ್ವಭಾಗ ಮತ್ತು ಉತ್ತರ ಭಾಗದ ಹಲವು ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಬೆಳೆಗೆ ರೋಗ ತಗುಲಿರುವುದರಿಂದ ಇಳುವರಿ ಗಣನೀಯವಾಗಿ ಕುಸಿಯುವ ಭೀತಿ ರೈತರನ್ನು ಕಾಡುತ್ತಿದೆ.
ಈ ಭಾಗದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಹನಿ ನೀರಾವರಿ ಅಳವಡಿಸಿಕೊಂಡು ದ್ರಾಕ್ಷಿ ಬೆಳೆಯುವುದಕ್ಕೆ ಬಹಳಷ್ಟು ರೈತರು ಸಿದ್ಧತೆ ಕೈಗೊಂಡಿದ್ದರು. ಆದರೆ, ದ್ರಾಕ್ಷಿಗೆ ರೋಗ ಕಾಣಿಸಿಕೊಳ್ಳುತ್ತಿರುವುದರಿಂದ ರೈತರಿಗೆ ನಿರಾಸೆಯಾಗಿದೆ.
ಪರಿಹಾರಕ್ಕೆ ಒತ್ತಾಯ: ‘ಲಾಕ್‌ಡೌನ್‌ದಿಂದಾಗಿ ಮೊದಲೇ ನಾವು ನಷ್ಟದಲ್ಲಿದ್ದೇವೆ. ಕುಟುಂಬ ನಿರ್ವಹಣೆ ಸವಾಲಾಗಿದೆ. ಆರ್ಥಿಕ ಸಮಸ್ಯೆಯಿಂದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಹೇಗೋ ಸಮಸ್ಯೆಯಿಂದ ಹೊರಬಂದು ಹೊಸ ಬದುಕು ಕಟ್ಟಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೆ ಬೆಳೆಗೆ ರೋಗ ತಗುಲಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ನಮ್ಮ ನೆರವಿಗೆ ಮುಂದಾಗಬೇಕು’ ಎಂದು ತೆಲಸಂಗ ಸೇರಿ ಸುತ್ತಲಿನ ಗ್ರಾಮಗಳ ದ್ರಾಕ್ಷಿ ಬೆಳೆಗಾರರು ಒತ್ತಾಯ ಮಾಡಿದ್ದಾರೆ.
ದಾವನಿ ರೋಗದಿಂದ ದ್ರಾಕ್ಷಿ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಉದುರುತ್ತಿವೆ. ಈ ರೋಗದಿಂದ ಬೆಳೆ ರಕ್ಷಿಸಿಕೊಳ್ಳಲು ದಿನಂಪ್ರತಿ ಔಷಧ ಸಿಂಪಡಣೆ ಮಾಡುತ್ತಿದ್ದೇವೆ.| ಬಸವರಾಜ ಅಸ್ಕಿ, ದ್ರಾಕ್ಷಿ ಬೆಳೆದ ರೈತ, ಕನ್ನಾಳತೆಲಸಂಗ ಭಾಗದಲ್ಲಿ ದಾವನಿ ರೋಗ ಕಾಣಿಸಿಕೊಂಡಿದೆ. ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.| ಅಕ್ಷಯಕುಮಾರ ಉಪಾಧ್ಯಾಯ ತೋಟಗಾರಿಕೆ ಅಧಿಕಾರಿ ತೆಲಸಂಗ