ಜಿಲ್ಲೆ

ದ್ರಾಕ್ಷಿ ಬೆಳೆಗೂ ಕರೊನಾ ಕಂಟಕ, ಬೆಳೆದ ಫಸಲಿಗೆ ಮಾರುಕಟ್ಟೆಯಿಲ್ಲ, ತೋಟದಲ್ಲೇ ಕೊಳೆಯುತ್ತಿರುವ ಹಣ್ಣು ತಾಲೂಕಿನಲ್ಲಿ 400 ಎಕರೆಯಲ್ಲಿ ಬೆಳೆ ನಾಶ

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ

ಹೂವು, ಹಣ್ಣು, ತಾಜಾ ತರಕಾರಿಗಳಿಗೆ ಪ್ರಖ್ಯಾತವಾಗಿರುವ ದೊಡ್ಡಬಳ್ಳಾಪುರ ರೈತರು ಹನಿ ಹನಿ ನೀರುಣಿಸಿ ಬೆಳೆದಿದ್ದ ದ್ರಾಕ್ಷಿ ಬೆಳೆಗೆ ಕರೊನಾ ಕಂಟಕ ಎದುರಾಗಿದೆ.

ರಾಜ್ಯದ ಜತೆಗೆ ಪಕ್ಕದ ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿನ ಲಾಕ್‌ಡೌನ್ ಹಾಗೂ ಮಾರುಕಟ್ಟೆ ನಿಯಂತ್ರಣದಿಂದ ತಾಲೂಕಿನಿಂದ ಸರಬರಾಜು ಆಗುತ್ತಿದ್ದ ದ್ರಾಕ್ಷಿಯನ್ನು ಕೇಳುವವರೇ ಇಲ್ಲವಾಗಿದ್ದಾರೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ದ್ರಾಕ್ಷಿ ಗೊಂಚಲಲ್ಲೇ ಕೊಳೆಯುವ ಸ್ಥಿತಿ ಎದುರಾಗಿದೆ. ಇದರಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ.

ಕೆಜಿಗೆ 3 ರೂ.: ತಾಲೂಕಿನಾದ್ಯಂತ ಒಂದೂವರೆ ಸಾವಿರ ಎಕರೆಯಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ಇದರಲ್ಲಿ 400 ಎಕರೆಯಷ್ಟು ದ್ರಾಕ್ಷಿ ಬೆಳೆಗೆ ಮಾರುಕಟ್ಟೆ ಇಲ್ಲದೆ, ಸಾರಿಗೆ ವ್ಯವಸ್ಥೆಯಿಲ್ಲದೆ ತೋಟದಲ್ಲೇ ಉದುರಿ ಮಣ್ಣು ಪಾಲಾಗುತ್ತಿದೆ. ಫೆಬ್ರವರಿ, ಮಾರ್ಚ್‌ನಲ್ಲಿ ಕೆಜಿ ದ್ರಾಕ್ಷಿಗೆ 40 ರಿಂದ 50 ರೂ. ಬೆಲೆ ಇತ್ತು. ಈಗ ಕೆಜಿಗೆ 3 ರಿಂದ 5 ರೂ.ಗೆ ಕುಸಿದಿದೆ. ತೋಟಗಳಲ್ಲಿ ಬೆಂಗಳೂರು ಬ್ಲೂೃ, ಕಾಬೂಲ್, ಸೀಡ್‌ಲೆಸ್ ಹೀಗೆ ತರಹೇವಾರಿ ಬೆಳೆ ಗೊಂಚಲಲ್ಲೇ ಕೊಳೆಯಲಾರಂಭಿಸಿದ್ದು, ತಾಲೂಕಿನಲ್ಲೇ 8 ರಿಂದ 10 ಕೋಟಿ ರೂ. ನಷ್ಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ ವರ್ಷವೂ ಲಾಕ್‌ಡೌನ್‌ನಿಂದ ಬೆಳೆ ನಾಶವಾಗಿತ್ತು. ಈ ಬಾರಿ ಉತ್ತಮ ಲಾಭದ ನಿರೀಕ್ಷೆಯಲ್ಲಿ ಬೆಳೆ ಸಾಲ ಪಡೆದು ಕೃಷಿ ಮಾಡಿದ್ದೆ, ಉತ್ತಮ ಇಳುವರಿ ಕೂಡ ಬಂದಿದೆ. ಆದರೆ ಕರೊನಾ, ಲಾಕ್‌ಡೌನ್‌ನಿಂದಾಗಿ ದ್ರಾಕ್ಷಿಗೆ ಬೆಲೆ ಇಲ್ಲವಾಗಿದೆ. ಹಣ್ಣು ಖರೀದಿದಾರರ ಇಲ್ಲದೆ, ಗೊಂಚಲಲ್ಲೇ ಕೊಳೆಯುವ ದುಸ್ಥಿತಿ ಉಂಟಾಗಿದೆ. ಸೋರೆಕಾಯಿ ಬೆಳೆಯೂ ಇದೇ ರೀತಿ ನಷ್ಟವಾಗಿದೆ. ಸರ್ಕಾರ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿ ಪರಿಹಾರಧನ ಕೊಡಬೇಕು. ರಾಮಕೃಷ್ಣಯ್ಯ ಹೊನ್ನಾದೇವಿಪುರ ರೈತ ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ ಇಲ್ಲದೆ ರೈತರು ಪರಿತಪಿಸುವಂತಾಗಿದೆ. ಕಳೆದ ಬಾರಿಯೂ ನಷ್ಟ ಅನುಭವಿಸಿದ್ದ ದ್ರಾಕ್ಷಿ ಬೆಳೆಗಾರರಿಗೆ ಈ ಬಾರಿಯೂ ಸಾರಿಗೆ, ಮಾರುಕಟ್ಟೆ ಇಲ್ಲದೆ ನಷ್ಟಕ್ಕೆ ತುತ್ತಾಗಿದ್ಧಾರೆ. ಸರ್ಕಾರದ ಮಾರ್ಗಸೂಚಿ ಅನ್ವಯ ಪರಿಹಾರಧನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಶ್ರೀನಿವಾಸ್ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ